ಕಾಞಂಗಾಡ್ ನಲ್ಲಿ ಅಪಘಾತಕ್ಕೀಡಾದ ಟ್ಯಾಂಕರ್ ನಿಂದ ಗ್ಯಾಸ್ ವರ್ಗಾವಣೆ ಪೂರ್ಣ: ನಿಟ್ಟುಸಿರುಬಿಟ್ಟ ಸ್ಥಳೀಯರು
ಸಹಜ ಸ್ಥಿತಿಗೆ ಜನಜೀವನ: ವಾಹನ ಸಂಚಾರ ಪುನರಾರರಂಭ

ಕಾಸರಗೋಡು: ಕಾಞಂಗಾಡ್ ಸೌತ್ ನಲ್ಲಿ ಗುರುವಾರ ರಾತ್ರಿ ಅಪಘಾತಕ್ಕೀಡಾದ ಅನಿಲ ಸಾಗಾಟದ ಟ್ಯಾಂಕರ್ ನಿಂದ ಅನಿಲವನ್ನು ಬೇರೆ ಟ್ಯಾಂಕರ್ ಗಳಿಗೆ ವರ್ಗಾಯಿಸಲಾಗಿದ್ದು, ಪರಿಸರದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಪರಿಸರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ.
ಗುರುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಅನಿಲ ಸಾಗಾಟದ ಟ್ಯಾಂಕರ್ ಕಾಞಂಗಾಡ್ ಸೌತ್ ನಲ್ಲಿ ರಸ್ತೆ ಬದಿ ಮಗುಚಿ ಬಿದ್ದಿತ್ತು. ಶುಕ್ರವಾರ ಬೆಳಗ್ಗೆ ಟ್ಯಾಂಕರ್ ಅನ್ನು ಮೇಲೆತ್ತುವ ವೇಳೆ ಅನಿಲ ಸೋರಿಕೆಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿತ್ತು. ಬಳಿಕ ಮಂಗಳೂರಿನ ಎಚ್.ಪಿ.ಸಿ.ಎಲ್. ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಎಚ್.ಪಿ.ಸಿ.ಎಲ್. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಕಾರ್ಯಾಚರಣೆ ನಡೆಸಿದರು. ರಾತ್ರಿ 11:30ರ ಸುಮಾರಿಗೆ ಅಪಘಾತಕ್ಕೀಡಾದ ಟ್ಯಾಂಕರ್ ನಿಂದ ಅನಿಲವನ್ನು ಬೇರೆ ಟ್ಯಾಂಕರ್ ಗಳಿಗೆ ವರ್ಗಾಯಿಸುವಲ್ಲಿ ಯಶಸ್ವಿಯಾದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆಯಿಂದ ವಾಹನ ಸಂಚಾರ ಪುನರಾರಂಭಿಸಲಾಗಿದೆ.
ಬೆಂಗಳೂರಿನಿಂದ ಕೊಯಮುತ್ತೂರಿ ಗೆ ತೆರಳುತ್ತಿದ್ದಾಗ ಅನಿಲ ಸಾಗಾಟದ ಟ್ಯಾಂಕರ್ ಗುರುವಾರ ರಾತ್ರಿ ಕಾಞಂಗಾಡ್ ಸೌತ್ ನಲ್ಲಿ ರಸ್ತೆ ಬದಿಗೆ ಉರುಳಿಬಿದ್ದಿದೆ. ಈ ವೇಳೆ ಟ್ಯಾಂಕರ್ ನಿಂದ ಅನಿಲ ಸೋರಿಕೆ ಕಾಣಿಸಿಕೊಂಡಿರಲಿಲ್ಲ. ಆದರೂ ಪರಿಸರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿತ್ತು.
ಶುಕ್ರವಾರ ಬೆಳಗ್ಗೆ ಟ್ಯಾಂಕರ್ ನ್ನು ಕ್ರೇನ್ ಬಳಸಿ ಮೇಲಕ್ಕೆತ್ತುವ ಸಂದರ್ಭ ಅನಿಲ ಸೋರಿಕೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಎಚ್.ಪಿ.ಸಿ.ಎಲ್. ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅದರಂತೆ ಸ್ಥಳಕ್ಕೆ ಆಗಮಿಸಿದ ತಜ್ಞರ ತಂಡವು ಟ್ಯಾಂಕರ್ ನಿಂದ ಅನಿಲ ಸೋರಿಕೆಯನ್ನು ತಡೆಗಟ್ಟಿತು. ಬಳಿಕ ಮೂರು ಟ್ಯಾಂಕರ್ ಗಳಿಗೆ ಅನಿಲವನ್ನು ವರ್ಗಾವಣೆ ಪ್ರಕ್ರಿಯೆ ಆರಂಭಿಸಿತು. ಸುದೀರ್ಘವಾಗಿ ನಡೆದ ಈ ಪ್ರಕ್ರಿಯೆ ರಾತ್ರಿ 11:30ರ ಸುಮಾರಿಗೆ ಪೂರ್ಣಗೊಂಡಿತು. ತಡರಾತ್ರಿ ಎರಡು ಗಂಟೆ ಬಳಿಕ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಪುನರಾರಂಭಗೊಂಡಿತು.







