‘ಕರ್ಗಲ್ಲು ಯಕ್ಷ ಮಾರ್ಗ’: ತೆಂಕುತಿಟ್ಟು ಯಕ್ಷಗಾನ ಪ್ರಾಥಮಿಕ ಹಂತದ ನಾಟ್ಯ ದಾಖಲೀಕರಣ ಪಠ್ಯ ಲೋಕಾರ್ಪಣೆ

ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಹಿರಿಯ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ನಾಟ್ಯ ಸಂಪತ್ತನ್ನು ಆಧರಿಸಿದ ‘ಕರ್ಗಲ್ಲು ಯಕ್ಷ ಮಾರ್ಗ’ (ತೆಂಕುತಿಟ್ಟು ಯಕ್ಷಗಾನದ ಪ್ರಾಥಮಿಕ ಹಂತದ ನಾಟ್ಯ ಪ್ರಸ್ತುತಿ) ದಾಖಲೀಕರಣ ಪಠ್ಯವು ಲೋಕಾರ್ಪಣೆಗೊಂಡಿದೆ.
ಆಗಸ್ಟ್ 25ರ ಮಂಗಳವಾರದಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಯಕ್ಷ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಈ ದಾಖಲೀಕರಣದ ಕಿರುಭಾಗವನ್ನು ಮಾಧ್ಯಮಕ್ಕೆ ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಶಂಭಯ್ಯ ಕಂಜರ್ಪಣೆ, ಕಲಾವಿದ ಹಾಗೂ ಉಪನ್ಯಾಸಕ ಡಾ. ಶ್ರುತಕೀರ್ತಿರಾಜ ಉಜಿರೆ, ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ, ಸುಮಿತ್ರಾ ಆರ್. ಮಯ್ಯ, ಶ್ರೀಮುಖ ಎಸ್.ಆರ್. ಮಯ್ಯ ಹಾಗೂ ರಾಜ ಎಸ್.ಆರ್. ಮಯ್ಯ ಉಪಸ್ಥಿತರಿದ್ದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಆರಂಭವಾದಂದಿನಿಂದಲೂ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ.
ಅಂದಾಜು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಿರಂತರ ಯಕ್ಷಗಾನ ಅಧ್ಯಯನ, ಅಧ್ಯಾಪನದ ವಿಶೇಷ ಅನುಭವ ಹೊಂದಿರುವ ತೆಂಕುತಿಟ್ಟಿನ ಪ್ರಮುಖ ಕಲಾವಿದರಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ಅಮೂಲ್ಯ ನಾಟ್ಯ ಸಂಪತ್ತನ್ನು ಸಂರಕ್ಷಿಸುವ ಉದ್ದೇಶದಿಂದ ಈ ದಾಖಲೀಕರಣವನ್ನು ಕೈಗೊಳ್ಳಲಾಗಿದೆ. ಈ ಪ್ರಾತ್ಯಕ್ಷಿಕೆಯು ಮುಂದಿನ ದಿನಗಳಲ್ಲಿ ಯಕ್ಷಗಾನ ವಿದ್ಯಾರ್ಥಿಗಳು, ನಾಟ್ಯ ಶಿಕ್ಷಕರು ಮತ್ತು ಕಲಾವಿದರಿಗೆ ಅಧ್ಯಯನಕ್ಕೆ ಸಂಪೂರ್ಣ ಸಹಕಾರಿಯಾಗಲಿದೆ. ಆಸಕ್ತರು ಹಾಗೂ ಅಗತ್ಯವಿರುವವರು ಪ್ರತಿಷ್ಠಾನವನ್ನು ಸಂಪರ್ಕಿಸಿ ಇದರ ಪ್ರಯೋಜನ ಪಡೆಯಬಹುದಾಗಿದೆ.
ಕೆ.ಕೆ. ಶೆಟ್ಟಿ (ಅಹಮದ್ ನಗರ), ವಾಸುದೇವ ಐತಾಳ (ಪಣಂಬೂರು), ಮಹಾಬಲೇಶ್ವರ ಭಟ್ (ಎಡಕ್ಕಾನ) ಹಾಗೂ ಮಧುರ ಉಪಾಧ್ಯ (ಬೆಂಗಳೂರು) ಅವರು ಈ ಯೋಜನೆಗೆ ಆರ್ಥಿಕ ಬೆಂಬಲ ನೀಡಿದ್ದಾರೆ.
ಕಲಾವಿದರಾದ ಶಂಭಯ್ಯ ಕಂಜರ್ಪಣೆ, ಮಧೂರು ಗೋಪಾಲಕೃಷ್ಣ ನಾವಡ, ಲಕ್ಷ್ಮಣ ಕುಮಾರ್ ಮರಕಡ ಹಾಗೂ ಶಿವಾನಂದ ಪೆರ್ಲ ಅವರು ದಾಖಲೀಕರಣಕ್ಕೆ ಸಹಕರಿಸಿದ್ದಾರೆ. ಎಸ್.ವಿ. ವಿಷನ್‌ನ ಶ್ರೀಮುಖ ಮಯ್ಯ ಎಸ್. ಹಾಗೂ ಕಾರ್ತಿಕ್ ಕರ್ಗಲ್ಲು ಅವರು ಚಿತ್ರೀಕರಣದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಆಸಕ್ತ ಅಧ್ಯಯನಕಾರರಿಗೆ ಮುಂಬರುವ ದಿನಗಳಲ್ಲಿ ಈ ಸಂಪೂರ್ಣ ದಾಖಲೀಕರಣವು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಲಭ್ಯವಿರಲಿದೆ ಎಂದು ಪ್ರತಿಷ್ಠಾನ ತಿಳಿಸಿದೆ.






