ಕಾಸರಗೋಡು : ಯುಪಿಎಸ್‌ಸಿ ಪರೀಕ್ಷೆಯಲ್ಲಿ 382ನೇ ರ‍್ಯಾಂಕ್ ಗಳಿಸಿದ ಮೊಹಮ್ಮದ್ ಅಶ್ಮಿಲ್ ಶಾಹ್ ಹುದವಿಗೆ ಸನ್ಮಾನ

ಕಾಸರಗೋಡು: ತೆಕ್ಕಿಲ್ ಸಮೀಪದ ಕುನಿಯ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಐಎಎಸ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿ ತರಬೇತಿ ಪಡೆದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 382ನೇ ರ‍್ಯಾಂಕ್ ಗಳಿಸಿದ ಮೊಹಮ್ಮದ್ ಅಶ್ಮಿಲ್ ಶಾಹ್ ಹುದವಿ ಅವರನ್ನು ಸಂಸ್ಥೆಯ ವತಿಯಿಂದ ಕುನಿಯ ಕ್ಯಾಂಪಸ್‌ನಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಶ್ಮಿಲ್ ಶಾಹ್ ಹುದವಿ ಅವರನ್ನು ಗೌರವಿಸಿದರು.
ನಂತರ ಮಾತನಾಡಿದ ಶಾಹಿದ್ ತೆಕ್ಕಿಲ್ ಅವರು, ಅಶ್ಮಿಲ್ ಶಾಹ್ ಹುದವಿ ಈ ಮಟ್ಟಕ್ಕೆ ಬೆಳೆಯಲು ಚೆಮ್ಮಾಡಿನ ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಹಾಗೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕುನಿಯ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಐಎಎಸ್ ಅಕಾಡೆಮಿಯು ಮಹತ್ವದ ಕೊಡುಗೆ ನೀಡಿವೆ ಎಂದು ಹೇಳಿದರು. ಕುನಿಯದಲ್ಲಿ ಐಎಎಸ್ ಅಕಾಡೆಮಿ ಹಾಗೂ ಬೃಹತ್ ಸಮೂಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ಕುನಿಯ ಇಬ್ರಾಹಿಂ ಅಹ್ಮದ್ ಅಲಿ ಹಾಜಿ ಅವರನ್ನು ಶಾಹಿದ್ ತೆಕ್ಕಿಲ್ ಅಭಿನಂದಿಸಿದರು.
ಸಮಾರಂಭದಲ್ಲಿ ಕಣ್ಣೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಹಾಗೂ ಕುನಿಯ ಸಂಸ್ಥೆಯ ಸಲಹೆಗಾರ ಡಾ. ಖಾದರ್ ಮಾಂಙಾಡ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ.ಎಚ್. ಕುಂಞಂಬು, ಎ.ಕೆ.ಎಂ. ಅಶ್ರಫ್, ಬಿಹಾರದ ಮುಜಫರ್‌ಪುರ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಬುಲ್ಲಾ ಅನ್ಸಾರಿ (ಐಪಿಎಸ್), ಕಾಸರಗೋಡು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶಿವಂ (ಐಪಿಎಸ್), ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲ ಕುಂಞಿ, ಪೆರಿಯ ಪಂಚಾಯತ್ ಅಧ್ಯಕ್ಷೆ ಡಾ. ಸಬಿತ, ಪಳ್ಳಿಕ್ಕೆರೆ ಪಂಚಾಯತ್ ಅಧ್ಯಕ್ಷೆ ಶೋಭನಾ, ಡಾ. ಸಂತೋಷ್, ಸುದೀಪ್ ಮತ್ತಿತರರು ಉಪಸ್ಥಿತರಿದ್ದರು.
ಶಿಬಿಲಿ ಶಹಾದತಿ ಅವರು ಕುನಿಯ ಐಎಎಸ್ ಅಕಾಡೆಮಿ ಮತ್ತು ಶಿಕ್ಷಣ ಸಂಸ್ಥೆಗಳ ಬಗ್ಗೆ ವಿವರಿಸಿದರು. ಡಾ. ಲಕ್ಷ್ಮೀಭಾಯಿ ಸ್ವಾಗತಿಸಿ, ಅಜ್ಮಲ್ ವಂದಿಸಿದರು. ನಂತರ ಸಾಮೂಹಿಕ ಇಫ್ತಾರ್ ಕೂಟ ನಡೆಯಿತು.







