ಕಾಸರಗೋಡು : ಹಳೆ ದ್ವೇಷದ ಹಿನ್ನೆಲೆ; 50 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ಸಹಪಾಠಿಗಳು

ಕಾಸರಗೋಡು : ಹಳೆ ದ್ವೇಷದಿಂದ 50 ವರ್ಷಗಳ ಬಳಿಕ ಸಹಪಾಠಿಗಳು ಸೇಡು ತೀರಿಸಿಕೊಂಡ ಅಪರೂಪದ ಘಟನೆ ವೆಳ್ಳರಿಕುಂಡು ಎಂಬಲ್ಲಿ ನಡೆದಿದೆ.
ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಹೊಡೆದ ಕಾರಣಕ್ಕೆಸಹಪಾಠಿ ವಿರುದ್ಧ ಇಬ್ಬರು ಸೇಡು ತೀರಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವೆಳ್ಳರಿಕುಂಡುವಿನ ಮಾಲೋಮ್ ನಿವಾಸಿಗಳಾದ ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಲಿಯಪ್ಲಾಕ್ಕಲ್ ಅವರನ್ನು ವೆಳ್ಳರಿಕುಂಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಲೋಮ್‌ನ ವೆಟ್ಟಿಕೊಂಪಿಲ್ ವಿ.ಜೆ. ಬಾಬು ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.
ಜೂನ್ ಎರಡರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮಾಲೋಮ್ ಪಟ್ಟಣದಲ್ಲಿ ಈ ದಾಳಿ ನಡೆದಿತ್ತು. ಇಬ್ಬರು ವಿ. ಜೆ ಬಾಬು ರವರನ್ನು ತಡೆದು ಥಳಿಸಿದ್ದು, ಗಾಯಗೊಂಡ ಬಾಬು ರವರನ್ನುಪರಿಯಾರಂನಲ್ಲಿರುವ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆ ಬಗ್ಗೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸಿದಾಗ 50 ವರ್ಷಗಳ ಹಿಂದಿನ ಸೇಡಿನ ಕಥೆ ಬೆಳಕಿಗೆ ಬಂದಿದೆ. ಮೂವರು ಮಾಲೋಮ್ ನಟ್ಟಕಲ್ಲು ಅನುದಾನಿತ ಯುಪಿ ಶಾಲೆಯಲ್ಲಿ 4 ನೇ ತರಗತಿಯಲ್ಲಿ ಒಟ್ಟಿಗೆ ಕಲಿಯುತ್ತಿದ್ದರು. ಈ ಸಮಯದಲ್ಲಿ ಬಾಬು ರವರು ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ರವರ ಮೇಲೆ ಹಲ್ಲೆ ನಡೆಸಿದ್ದರು. ಜೂನ್ ಒಂದರಂದು ಬಾಬು ಹಾಗೂ ಬಾಲಕೃಷ್ಣನ್ ನಡುವೆ ಜಗಳವಾಗಿದೆ. ಮರುದಿನ ಮ್ಯಾಥ್ಯೂ ಜೊತೆ ಸೇರಿ ಪಾನಮತ್ತರಾಗಿ ಇಬ್ಬರು ಬಾಬು ರವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಆಗಾಗ ಮೂವರೂ ಪರಸ್ಪರ ಭೇಟಿ ಯಾಗುತ್ತಿದ್ದರು . ಆದರೆ ಜೂನ್ ಒಂದರಂದು ಯಾವುದೋ ಕಾರಣಕ್ಕೆ ಮಾತಿನ ಚಕಮಕಿ ನಡೆದು ಪೂರ್ವ ದ್ವೇಷ ಹೊರಬಿದ್ದಿದ್ದು , ಶಾಲೆಯಲ್ಲಿ ಹೊಡೆದ ಬಗ್ಗೆ ಪ್ರಶ್ನಿಸಿ , ಜಗಳಕ್ಕಿಳಿದಿದ್ದು, ಇಬ್ಬರೂ ಸೇರಿ ಥಳಿಸಿದ್ದಾರೆ. ಗಾಯಗೊಂಡ ಬಾಬು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.