ಕಾಸರಗೋಡು ಜಿಲ್ಲಾಧಿಕಾರಿಗಳಿಂದ ಸಭೆ: ಕೇರಳದಲ್ಲೂ ಯಕ್ಷಗಾನ ಅಕಾಡೆಮಿ ಸ್ಥಾಪಿಸಬೇಕಾಗಿ ಕಲಾವಿದರ ವಿನಂತಿ

ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಡಿನಾಡು ಕಾಸರಗೋಡಿನಲ್ಲಿ ಯಕ್ಷಗಾನ ಕಲಾವಿದರ ಸಂಕಷ್ಟ ಕುರಿತಾದ ಸಮಾಲೋಚನಾ ಸಭೆಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕೇರಳ ಸರ್ಕಾರದಿಂದ ಯಕ್ಷಗಾನಕ್ಕೆ ಪ್ರತ್ಯೇಕ ಆಕಾಡಮಿ ರಚಿಸುವ ಕುರಿತಾದ ಸಲಹೆಗಳು ಬಂದಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಸ್ಪಂದಿಸಿದ್ದಾರೆ.
ಶ್ರೀ ಧರ್ಮಸ್ಥಳ ಮೇಳದ ಯಕ್ಷಗಾನ ಭಾಗವತ, ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು, ವಾಮನ ಆಚಾರ್ಯ, ರಾಕೇಶ್ ಗೋಳಿಯಡ್ಕ, ಕಲಾವಿದ ಸುರೇಶ್ ಬೇಕಲ್, ಚಂದ್ರ ಮೋಹನ್ ಕೂಡ್ಲು ಮುಂತಾದವರು ಭಾಗವಹಿಸಿದರು.
ಯಕ್ಷಗಾನದ ತವರೂರು, ಪ್ರಾರ್ಥಿಸುಬ್ಬನ ಜನ್ಮನಾಡು ಕಾಸರಗೋಡಿನಲ್ಲಿ ಮನೆ-ಮನೆಯಲ್ಲೂ ಯಕ್ಷಗಾನದ ವಾತಾವರಣವಿತ್ತು, 22ಕ್ಕೂ ಹೆಚ್ಚು ವೃತ್ತಿಪರ ಮೇಳಗಳಿದ್ದವು. ಇವತ್ತು ಮಾತ್ರ, ಬೆರಳೆಣಿಕೆಯಷ್ಟೇ ಮೇಳಗಳು ಜಿಲ್ಲೆಯಲ್ಲಿರುವ ಕಾರಣ ಕಾಸರಗೋಡಿನ ಕಲಾವಿದರು, ಜನರು ಯಕ್ಷಗಾನದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಪ್ರದರ್ಶನ ಹಾಗೂ ಇನ್ನಿತರ ವಿಚಾರದಲ್ಲಿ ಕರ್ನಾಟಕವನ್ನೇ ಅವಲಂಬಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಯಕ್ಷಗಾನವನ್ನು ಉಳಿಸಿ, ಬೆಳೆಸುವ ದೃಷ್ಟಿಕೋನದಿಂದ ಕರ್ನಾಟಕ ಸರಕಾರದಂತೆಯೇ, ಕೇರಳ ಸರಕಾರವೂ ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸಿ, ಹಿರಿಯ ಅನುಭವಿ ಕಲಾವಿದರೊಳಗಂಡ ಅದ್ಯಕ್ಷರನ್ನು, ಸದಸ್ಯರನ್ನು ಆಯ್ಕೆ, ಮಾಡಿ ಕಾರ್ಯ ಚಟುವಟಿಕೆ ಆರಂಭಿಸಬೇಕಾಗಿದೆ. ಯಕ್ಷಗಾನ ಪ್ರಸಂಗಗಳನ್ನು ಮಲಯಾಳಮ್-ಗೂ ಭಾಷಾಂತರಿಸಿ ಕೇರಳದಾದ್ಯಂತ ಪಸರಿಸಬೇಕು. ಈ ಕುರಿತಾಗಿ ಜಿಲ್ಲಾಧಿಕಾರಿಗಳು ಕೇರಳ ಸರಕಾರಕ್ಕೆ ಮನವಿ ಮಾಡಿ, ಕೂಡಲೇ ಸ್ಪಂದಿಸಬೇಕೆಂದು ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ವಿನಂತಿಸಿದರು.
ಕಲಾವಿದರಿಗೆ ವಿಮಾ ಹಾಗೂ ಪೆನ್ಷನ್ ಸೌಲಭ್ಯ ಮುಂತಾದ ಆರ್ಥಿಕ ಸಹಕಾರವನ್ನು ಸರಕಾರ ನೀಡಬೇಕೆಂದು ಸುರೇಶ್ ಬೇಕಲ್ ವಿನಂತಿಸಿದರು.
ಯಕ್ಷಗಾನ ಅಕಾಡೆಮಿ ಅತೀ ಅಗತ್ಯ ಎಂದು ವಾಮನ ಆಚಾರ್ಯ ಅವರೂ ತಿಳಿಸಿದರು.
ಕಾಸರಗೋಡು ಜಿಲ್ಲಾಧಿಕಾರಿಗಳು ಈ ಕುರಿತು ಕೂಡಲೇ ಸರಕಾರದೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಹಂತದಲ್ಲಿ ಎಲ್ಲಾ ಕಲಾವಿದರನ್ನೊಳಗೊಂಡ ಸಮಾಲೋಚನ ಸಭೆ ನಡೆಸುವುದಾಗಿ ತಿಳಿಸಿದರು.