ಕಾಸರಗೋಡು | ಬಾವಿಯಲ್ಲಿ ಸಿಲುಕಿದ ವೃದ್ಧ, ಕಾರ್ಮಿಕನ ರಕ್ಷಣೆ

ಕಾಸರಗೋಡು : ಬಾವಿಗೆ ಬಿದ್ದ ವೃದ್ಧನನ್ನು ರಕ್ಷಿಸಲು ಇಳಿದ ಕಾರ್ಮಿಕನೂ ಮೇಲಕ್ಕೆ ಬರಲಾಗದೆ ಸಿಲುಕಿಕೊಂಡ ಘಟನೆ ನಗರದ ತಳಂಗರೆಯಲ್ಲಿ ಮಂಗಳವಾರ ಸಂಜೆ ನಡೆದಿದೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಸಂಜೆ ಸುಮಾರು ಏಳು ಗಂಟೆ ವೇಳೆಗೆ ತಳಂಗರೆ ಪಳ್ಳಿಕ್ಕಾಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಸುಮಾರು 15 ಅಡಿ ಆಳದ ಬಾವಿಗೆ 74 ವರ್ಷದ ನೆಲ್ಲಿಕುಂಜೆ ನಿವಾಸಿ ಟಿ.ಎಂ. ಮುನೀರ್ ಆಕಸ್ಮಿಕವಾಗಿ ಬಿದ್ದಿದ್ದಾರೆ.
ಘಟನೆಯನ್ನು ಕಂಡ ನಾಗರಿಕರು ಸಹಾಯಕ್ಕೆ ಧಾವಿಸಿದ್ದು, ಉತ್ತರ ಪ್ರದೇಶ ಮೂಲದ 30 ವರ್ಷದ ಲುಕ್‌ಮಾನ್ನವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ರಕ್ಷಿಸಲು ಪ್ರಯತ್ನಿಸಿದರೂ ವಿಫಲರಾಗಿದ್ದಾರೆ. ಇದರಿಂದ ಇಬ್ಬರೂ ಬಾವಿಯೊಳಗೆ ಸಿಲುಕಿಕೊಂಡಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಗ್ಗದ ಸಹಾಯದಿಂದ ಇಬ್ಬರನ್ನೂ ಮೇಲಕ್ಕೆತ್ತಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
Next Story





