ಕಾಸರಗೋಡು: ಶಾಲಾ ಕ್ವಿಝ್ನಲ್ಲಿ ಸಾವರ್ಕರ್ ಪ್ರಶಂಸೆ; ಶಿಕ್ಷಣ ಇಲಾಖೆಯಿಂದ ತುರ್ತು ತನಿಖೆಗೆ ಆದೇಶ

ಸಾವರ್ಕರ್ Photo: screengrab/x.com/IndianGems_
ಕಾಸರಗೋಡು: ಜಿಲ್ಲೆಯ ಲೋವರ್ ಪ್ರೈಮರಿ (ಎಲ್ಪಿ) ಶಾಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಉಪಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ, ವಿ.ಡಿ. ಸಾವರ್ಕರ್ ಅವರನ್ನು ಶ್ಲಾಘಿಸುವ ಪ್ರಶ್ನೆಯನ್ನು ಸೇರಿಸಿರುವುದು ಈಗ ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯು ಕಾಸರಗೋಡು, ಕುಂಬಳೆ ಮತ್ತು ಮಂಜೇಶ್ವರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ (AEO) ತಕ್ಷಣ ವರದಿ ನೀಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಂಜೇಶ್ವರ ಉಪಜಿಲ್ಲೆಯ ಸೋಶಿಯಲ್ ಸೈನ್ಸ್ ಕ್ಲಬ್ ಅಸೋಸಿಯೇಷನ್ ನೇತೃತ್ವದಲ್ಲಿ 'ಫ್ರೀಡಂ ಕ್ವಿಝ್' ಅನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯ ಟೈ-ಬ್ರೇಕರ್ ಸುತ್ತಿನಲ್ಲಿ, "ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆಗೆ ಒಳಗಾದ ಸ್ವಾತಂತ್ರ್ಯ ಹೋರಾಟಗಾರ ಯಾರು?" ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಶಿಕ್ಷಕರಿಗೆ ಮೌಲ್ಯಮಾಪನಕ್ಕಾಗಿ ನೀಡಲಾದ ಅಧಿಕೃತ ಉತ್ತರ ಸೂಚಿಯಲ್ಲಿ (Answer Key) ಇದಕ್ಕೆ 'ವಿ.ಡಿ. ಸಾವರ್ಕರ್' ಎಂದು ದಾಖಲಿಸಲಾಗಿತ್ತು.
ಈ ವಿಚಾರ ಸಾರ್ವಜನಿಕವಾಗಿ ಹೊರಬರುತ್ತಿದ್ದಂತೆ ಎಡಪಂಥೀಯ ಮತ್ತು ಯುಡಿಎಫ್ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. "ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಪೆನ್ಷನ್ ಪಡೆದ ಸಾವರ್ಕರ್ನನ್ನು ಮಹಾನ್ ಹೋರಾಟಗಾರ ಎಂದು ಪ್ರಾಥಮಿಕ ಶಾಲಾ ಮಕ್ಕಳಿಗೆ ಬೋಧಿಸುವುದು ದೇಶದ ಇತಿಹಾಸಕ್ಕೆ ಮತ್ತು ಪ್ರಾಣತ್ಯಾಗ ಮಾಡಿದ ನಾಯಕರಿಗೆ ಮಾಡಿದ ಅಪಮಾನ" ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಆಕ್ರೋಶ ಹೊರಹಾಕಿದ್ದಾರೆ. ಇತಿಹಾಸವನ್ನು ಕೇಸರೀಕರಣಗೊಳಿಸಲು ಮಂಜೇಶ್ವರದಲ್ಲಿ ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯುಳ್ಳ ಶಿಕ್ಷಕರೊಬ್ಬರು ಉದ್ದೇಶಪೂರ್ವಕವಾಗಿಯೇ ಇದನ್ನು ಸೇರಿಸಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಷನ್ (MSF) ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ಅಧಿಕೃತ ದೂರು ಸಲ್ಲಿಸಿದೆ.
ಸಚಿವರ ಮಧ್ಯಸ್ಥಿಕೆ:
ವಿವಾದ ತಾರಕಕ್ಕೇರುತ್ತಿದ್ದಂತೆ ಕೇರಳದ ಶಿಕ್ಷಣ ಸಚಿವರು ಘಟನೆಯಲ್ಲಿ ಹಸ್ತಕ್ಷೇಪ ಮಾಡಿದ್ದು, ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಂದ ಈ ಕುರಿತು ಸಮಗ್ರ ಮತ್ತು ತುರ್ತು ವರದಿಯನ್ನು ಕೇಳಿದ್ದಾರೆ. ಪ್ರಶ್ನಾವಳಿಗಳನ್ನು ಸಿದ್ಧಪಡಿಸುವ ಜವಾಬ್ದಾರಿ ಹೊಂದಿದ್ದ ಅಧಿಕಾರಿಗಳ ಸಮ್ಮತಿಯೊಂದಿಗೇ ಈ ಪ್ರಶ್ನೆಯನ್ನು ಸೇರಿಸಲಾಗಿದೆಯೇ ಎಂಬ ಬಗ್ಗೆಪ್ರಸ್ತುತ ತನಿಖೆ ಮುಂದುವರಿದಿದ್ದು, ತಪ್ಪು ಕಂಡುಬಂದಲ್ಲಿ ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಯಿದೆ.






