ಕಾಸರಗೋಡು| ಮದ್ಯಪಾನ ಮಾಡಿ ಕಾರು ಚಲಾಯಿಸಿದ ಎಸ್.ಆರ್. ಧನ್ಯ; ಮೂರು ತಿಂಗಳು ಡ್ರೈವಿಂಗ್ ಲೈಸೆನ್ಸ್ ಅಮಾನತು

ಕಾಸರಗೋಡು: ಮದ್ಯಪಾನ ಮಾಡಿ ಅತಿವೇಗ ಹಾಗೂ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಪ್ರಸಿದ್ಧ ಯೂಟ್ಯೂಬರ್ ಮತ್ತು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ 'ಹೆಲೆನ್ ಆಫ್ ಸ್ಪಾರ್ಟಾ' ಖ್ಯಾತಿಯ ಎಸ್.ಆರ್. ಧನ್ಯ (28) ಅವರ ಡ್ರೈವಿಂಗ್ ಲೈಸೆನ್ಸ್ ಅನ್ನು ಮೋಟಾರು ವಾಹನ ಇಲಾಖೆಯು ಮೂರು ತಿಂಗಳ ಕಾಲ ಅಮಾನತುಗೊಳಿಸಿದೆ.
ಲೈಸೆನ್ಸ್ ಸಸ್ಪೆಂಡ್ ಮಾಡಿರುವುದರ ಜೊತೆಗೆ, ಮೋಟಾರು ವಾಹನ ಇಲಾಖೆ ನಡೆಸುವ ಮೂರು ದಿನಗಳ ಕಡ್ಡಾಯ ಶಿಸ್ತು ಮತ್ತು ರಸ್ತೆ ಸುರಕ್ಷತಾ ತರಬೇತಿ ಕ್ಲಾಸ್‌ಗೂ ಅವರು ಹಾಜರಾಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಜುಲೈ ಮೊದಲ ವಾರದಲ್ಲಿ ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿಯ ಅಣಂಗೂರು ಎಂಬಲ್ಲಿ ಧನ್ಯ ಅವರು ತಮ್ಮ ಕಾರನ್ನು ಅಪಾಯಕಾರಿ ರೀತಿಯಲ್ಲಿ ರಸ್ತೆ ಮಧ್ಯೆ ನಿಲ್ಲಿಸಿದ್ದರು. ಇದನ್ನು ಗಮನಿಸಿ ತಪಾಸಣೆ ನಡೆಸಲು ಬಂದ ಪೊಲೀಸ್ ತಂಡವನ್ನು ಕಂಡು, ಅವರು ಕಾರನ್ನು ನಿಲ್ಲಿಸದೇ ತೀವ್ರ ಅತಿವೇಗದಲ್ಲಿ ಚಲಾಯಿಸಿಕೊಂಡು ಪರಾರಿಯಾಗಿದ್ದರು. ಬಳಿಕ ಪೊಲೀಸರು ಬೆನ್ನಟ್ಟಿ ಬಂದ್ಯೋಡು ಭಗವತಿ ನಗರ ಎಂಬಲ್ಲಿ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಧನ್ಯ ಅವರು ಮದ್ಯಪಾನ ಮಾಡಿರುವುದು ದೃಢಪಟ್ಟಿತ್ತು. ತಕ್ಷಣವೇ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.
ಘಟನೆ ಭಾರಿ ಸುದ್ದಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಧನ್ಯ, ತಾವು ಕಾರ್ಯಕ್ರಮವೊಂದರಲ್ಲಿ ಬಿಯರ್ ಸೇವಿಸಿರುವುದು ನಿಜ ಎಂದು ಒಪ್ಪಿಕೊಂಡಿದ್ದರು. ಆದರೆ, ತಾವು ಸೆಲೆಬ್ರಿಟಿಯಾ ಗಿರುವುದರಿಂದ ಸಾರ್ವಜನಿಕರು ಗುರುತಿಸುತ್ತಾರೆಂಬ ಭಯದಿಂದ ಪೊಲೀಸರನ್ನು ಕಂಡು ವಾಹನ ನಿಲ್ಲಿಸದೆ ತೆರಳಿದ್ದಾಗಿ ಸಮರ್ಥಿಸಿಕೊಂಡಿದ್ದರು. ಅಲ್ಲದೆ ಕಾರಿನಲ್ಲಿ ಮಾದಕ ದ್ರವ್ಯ ಇತ್ತು ಎಂಬ ವದಂತಿಗಳು ಸುಳ್ಳು ಎಂದು ಅವರು ಸ್ಪಷ್ಟನೆ ನೀಡಿದ್ದರು. ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇದೀಗ ಲೈಸೆನ್ಸ್ ಅಮಾನತುಗೊಳಿಸಿ ಕಠಿಣ ಕಾನೂನು ಕ್ರಮ ಜರುಗಿಸಿದ್ದಾರೆ.






