ಕಾಸರಗೋಡು | ನಕಲಿ ಪ್ರಮಾಣಪತ್ರ ವಿತರಣೆ ಆರೋಪ : ಮೂವರ ಬಂಧನ

ಸಾಂದರ್ಭಿಕ ಚಿತ್ರ
ಕಾಸರಗೋಡು : ನಕಲಿ ಪ್ರಮಾಣಪತ್ರಗಳನ್ನು ತಯಾರಿಸುತ್ತಿದ್ದ ಮೂವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಂಸ್ಥೆಯ ಮಾಲಕ ಕೋವಲ್ ಪಳ್ಳಿಯ ಸಂತೋಷ್ ಕುಮಾರ್ (45), ಕಾಞಂಗಾಡ್ ದಕ್ಷಿಣದ ನಿವಾಸಿ ಮತ್ತು ಚೆರುವತ್ತೂರಿನ ಮೌಕೋಡ್ ನಿವಾಸಿ ಪಿ. ರವೀಂದ್ರನ್ (51) ಮತ್ತು ಹೊಸದುರ್ಗ ಬೀಚ್ನ ಶಿಹಾಬ್ (34) ಎಂದು ಗುರುತಿಲಾಗಿದೆ.
ಕಾಞಂಗಾಡ್ ಪುದಿಯಕೋಟ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ನೆಟ್ ಫಾರ್ ಯು ಎಂಬ ಸಂಸ್ಥೆಯಲ್ಲಿ ಈ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ. ಸಂಸ್ಥೆಯಿಂದ ಕಂಪ್ಯೂಟರ್, ಹಾರ್ಡ್ ಡಿಸ್ಕ್ ಮತ್ತು ಸೀಲುಗಳು ಸೇರಿದಂತೆ ಹಲವಾರು ನಕಲಿ ದಾಖಲೆಗಳು ಮತ್ತು ನಕಲಿ ದಾಖಲೆಗಳನ್ನು ತಯಾರಿಸಲು ಬಳಸಲಾದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಿಹಾಬ್ ಅವರ ಮನೆಯಲ್ಲಿ ಶೋಧ ನಡೆಸಿ ಮುದ್ರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ರವೀಂದ್ರನ್ ಅವರ ನಿವಾಸದಲ್ಲೂ ತಪಾಸಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ದಾಖಲೆ ಪತ್ರ, ಪಾಸ್ಪೋರ್ಟ್ಗಳು, ಚಾಲನಾ ಪರವಾನಗಿಗಳು, ಎಸೆಸೆಲ್ಸಿ ಪ್ರಮಾಣಪತ್ರಗಳನ್ನು ನಕಲಿ ಮಾಡುವ ಬೃಹತ್ ದಂಧೆಯು ಇಲ್ಲಿ ಕಾರ್ಯಾಚರಿಸುತ್ತಿತ್ತು ಎನ್ನಲಾಗಿದೆ.
ದಂಧೆಯಲ್ಲಿ ಇನ್ನೂ ಹೆಚ್ಚಿನ ಜನರು ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.