Kasargod | ಪೊಲೀಸ್ ದಾಳಿ ವೇಳೆ ನದಿಗೆ ಜಿಗಿದಿದ್ದ ಯುವಕ ಮೃತ್ಯು
ನಾಲ್ಕು ದಿನಗಳ ಬಳಿಕ ಶಿರಿಯಾ ನದಿಯಲ್ಲಿ ಮೃತದೇಹ ಪತ್ತೆ

ಕಾಸರಗೋಡು: ಮರಳು ಸಾಗಣೆ ದೋಣಿಯ ಮೇಲೆ ಕರಾವಳಿ ಪೊಲೀಸರು ನಡೆಸಿದ ದಾಳಿಯ ವೇಳೆ ತಪ್ಪಿಸಿಕೊಳ್ಳಲು ನದಿಗೆ ಜಿಗಿದು ನಾಪತ್ತೆಯಾಗಿದ್ದ ಆರಿಕ್ಕಾಡಿ ಕಡವತ್ ನಿವಾಸಿ ಇಬ್ರಾಹೀಂ (35) ಎಂಬವರ ಮೃತದೇಹ ನಾಲ್ಕು ದಿನಗಳ ನಿರಂತರ ಹುಡುಕಾಟದ ಬಳಿಕ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.
ಶಿರಿಯಾ ನದಿಯ ಅಳಿವಿನಬಾಗಿಲು ಪ್ರದೇಶದಲ್ಲಿ ಮೀನುಗಾರರ ಬಲೆಗೆ ಸಿಲುಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸೆ.7ರಂದು ರಾತ್ರಿ 8 ಗಂಟೆ ಸುಮಾರಿಗೆ ಶಿರಿಯಾ ನದಿಯಲ್ಲಿ ಅಕ್ರಮ ಮರಳು ಸಾಗಣೆ ತಡೆಗೆ ಕರಾವಳಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಮರಳು ಸಾಗಣೆದಾರರು ದೋಣಿಯಿಂದ ನೀರಿಗೆ ಜಿಗಿದಿದ್ದರು. ಈ ಪೈಕಿ ಇಬ್ಬರು ಈಜಾಡಿ ದಡ ಸೇರಿ ಪಾರಾಗಿದ್ದರು. ಆದರೆ ಇಬ್ರಾಹೀಂ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು. ಕಳೆದ ಮೂರು ದಿನಗಳಿಂದ ಕೋಸ್ಟಲ್ ಪೊಲೀಸ್, ಕುಂಬಳೆ ಪೊಲೀಸ್ ಮತ್ತು ಸ್ಥಳೀಯ ಮೀನುಗಾರರು ಅವರಿಗಾಗಿ ತೀವ್ರ ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಗುರುವಾರ ಬೆಳ-ಗ್ಗೆ ಉಡುಪಿಯ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆಯವರ ತಂಡವನ್ನು ಸ್ಥಳಕ್ಕೆ ಕರೆಸಲಾಗಿತ್ತು. ಈಶ್ವರ್ ಮಲ್ಪೆ ನೇತೃತ್ವದಲ್ಲಿ ನಡೆದ ಆಳವಾದ ಹುಡುಕಾಟದ ಬಳಿಕ ಮೃತದೇಹವನ್ನು ನದಿಯಿಂದ ಹೊರತೆಗೆಯಲಾಗಿದೆ.
ಸ್ಥಳಕ್ಕೆ ಆಗಮಿಸಿದ ಕುಂಬಳೆ ಕೋಸ್ಟಲ್ ಪೊಲೀಸರು ಮಹಜರು ನಡೆಸಿದರು
ಮೃತ ಇಬ್ರಾಹೀಂ ಆರಿಕ್ಕಾಡಿ ಕಡವತ್ನ ಅಬ್ದುಲ್ ಖಾದರ್ ಮತ್ತು ಝೈನಬಾ ದಂಪತಿಯ ಪುತ್ರ.




