ಕಾಸರಗೋಡು: ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆ; ಜನಜೀವನ ಅಸ್ತವ್ಯಸ್ತ

ಕಾಸರಗೋಡು : ಜಿಲ್ಲೆಯಲ್ಲಿ ಗುರುವಾರ ಸಂಜೆಯಿಂದ ಎಡೆಬಿಡದೆ ಸುರಿದ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ . ಮಂಜೇಶ್ವರದ ಬಹುತೇಕ ಕಡೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಮಂಜೇಶ್ವರ ಹೊಸಬೆಟ್ಟು , ವರ್ಕಾಡಿ ಗೇರುಕಟ್ಟೆ , ಪಾವೂರು , ಉದ್ಯಾವರ ಮಚ್ಛಂಪಾಡಿ, ಬಂಗ್ರಮಂಜೇಶ್ವರ ಕುಂಬಳೆ ಸಮೀಪದ ಮೊಗ್ರಾಲ್ ಎರಿಯಾಲ್ ಮೊದಲಾಡೆ ಪ್ರವಾಹ ಸ್ಥಿತಿ ಉಂಟಾಗಿದೆ. ಮಧೂರು ದೇವಸ್ಥಾನ ಜಲಾವೃತಗೊಂಡಿದೆ .
ಮಲೆನಾಡ ಹೆದ್ದಾರಿಯ ಚೇವಾರ್ - ನಂದಾರಪದವು ರಸ್ತೆಯ ಹಲವೆಡೆ ಗುಡ್ದ ಕುಸಿತ ಹಾಗೂ ಮರಗಳು ಉರುಳಿ ಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ. ಬಂದ್ಯೋಡು - ಪೆರ್ಮುದೆ ರಸ್ತೆಯ ಕಯ್ಯಾರ್ ನಲ್ಲಿ ಗುಡ್ಡ ಕುಸಿತದ ಹಿನ್ನಲೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಚೆರ್ಕಳ - ಚಟ್ಟಂಚಾಲ್ ರಸ್ತೆಯ ಹಲವೆಡೆಗಳಲ್ಲಿ ರಸ್ತೆ ಕೊಚ್ಚಿ ಹೋಗಿದೆ. ಭೂಕುಸಿತ ಉಂಟಾಗಿದೆ.
ಮಂಜೇಶ್ವರ ಮಜಿಬೈಲ್ ಬಟ್ಟತ್ತೂರು ಎಂಬಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಬೈಕ್ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ. ಮಂಜೇಶ್ವರ ಹೊಸಬೆಟ್ಟು ವಿನಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದೆ. ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಾಸರಗೋಡು - ಚಂದ್ರಗಿರಿ ರಸ್ತೆಯ ಲ್ಲಿ ಭೂಕುಸಿತ ಉಂಟಾಗಿದೆ.