ಜ್ಞಾನವೆಂಬ ಆಯುಧವೇ ಸಮಸ್ತದ ಯಶಸ್ಸು: ಪಾಣಕ್ಕಾಡ್ ಶಿಹಾಬ್ ತಂಙಳ್

ಕಾಸರಗೋಡು: ಭಯೋತ್ಪಾದನೆಯ ಮೂಲಕ ಉದಯಿಸಿದ ಯಾವುದೇ ಚಳವಳಿಗೂ ದೀರ್ಘಕಾಲಿಕ ಸ್ಥಿರತೆ ಸಾಧಿಸಲು ಸಾಧ್ಯವಿಲ್ಲ. ಜ್ಞಾನವನ್ನು ಆಯುಧವನ್ನಾಗಿ ಮಾಡಿಕೊಂಡಿರುವುದೇ ಸಮಸ್ತದ ಯಶಸ್ಸು. ಆದ್ದರಿಂದಲೇ ಸಮಸ್ತವು ಮುಸ್ಲಿಂ ಸಮುದಾಯದ ನಂಬಿಕೆಯ ಪ್ರತಿರೂಪವಾಗಿದೆ ಎಂದು ಪಾಣಕ್ಕಾಡ್ ಸೈಯದ್ ಸ್ವಾದಿಖಲಿ ಶಿಹಾಬ್ ತಂಙಳ್ ಹೇಳಿದರು.
ಕಾಸರಗೋಡಿನ ಕುನಿಯದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಸಮಸ್ತ ಶತಮಾನೋತ್ಸವ ಮಹಾ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಸ್ತ ಕೋಶಾಧಿಕಾರಿ ಪಿ.ಪಿ. ಉಮರ್ ಮುಸ್ಲಿಯಾರ್ ಕೊಯ್ಯೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಯದ್ ಅಲಿ ತಂಙಳ್ ಕುಂಬೋಳ್ ದುಆಗೈದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೈರೋ ಇಸ್ಲಾಮಿಕ್ ರಿಸರ್ಚ್ ಅಸೆಂಬ್ಲಿ ಕ್ಯಾಬಿನೆಟ್ ಸಚಿವ ಡಾ. ಮುಹಮ್ಮದ್ ಅಬ್ದು ದಾಇಂ ಅಲ್ ಜುಂದಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಇಸ್ಲಾಂ ಧರ್ಮ ಶಿಕ್ಷಣ ಬೋರ್ಡ್ ಪ್ರಧಾನ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ಮುಖ್ಯ ಭಾಷಣಗೈದರು. ಶಾಸಕರಾದ ಎನ್.ಎ. ನೆಲ್ಲಿಕುನ್ನ್, ಎ.ಕೆ.ಎಂ. ಅಶ್ರಫ್, ಶಾಸಕ ಸಿ.ಎಚ್. ಕುಂಞಂಬು, ಎಂ. ರಾಜಗೋಪಾಲ್, ಇ. ಚಂದ್ರಶೇಖರನ್, ಮುಶಾವರ ಸದಸ್ಯರಾದ ಕೆ. ಹೈದರ್ ಫೈಝಿ ಪನಂಗಾಂಗರ, ಡಾ. ಬಹಾವುದ್ದೀನ್ ಮುಹಮ್ಮದ್ ನದ್ವಿ, ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರ ಸಹಿತ ಹಿರಿಯ ಉಲಮಾಗಳು, ಧಾರ್ಮಿಕ, ಸಾಮಾಜಿಕ ನಾಯಕರು ಉಪಸ್ಥಿತರಿದ್ದರು.
ಸಮಸ್ತ ಕಾರ್ಯದರ್ಶಿ ಕೆ. ಉಮರ್ ಫೈಝಿ ಮುಕ್ಕಂ ಸ್ವಾಗತಿಸಿದರು. ಕಾಸರಗೋಡು ಜಿಲ್ಲಾ ಸ್ವಾಗತ ಸಮಿತಿ ವರ್ಕಿಂಗ್ ಕನ್ವೀನರ್ ಅಬ್ದುಲ್ಲ ಫೈಝಿ ಚೆಂಗಳ ವಂದಿಸಿದರು.
*ಸಮಸ್ತವು ಜಾತ್ಯತೀತೆಯ ಕಾವಲು ಶಕ್ತಿ: ಜಿಫ್ರಿ ತಂಙಳ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಸ್ತ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಮಾತನಾಡಿ, ಸಮಸ್ತವು ಕಳೆದೊಂದು ಶತಮಾನಗಳ ಕಾಲ ಧಾರ್ಮಿಕ ಚಟುವಟಿಕೆಗಳಿಗೆ ನೇತೃತ್ವ ನೀಡುವುದರ ಜೊತೆಗೆ ಈ ದೇಶದ ಜಾತ್ಯತೀತೆಯ ಕಾವಲು ಶಕ್ತಿಯಾಗಿ ನಿಂತಿದೆ. ಧರ್ಮದ ಮೂಲ ತತ್ವಗಳಿಗೆ ಯಾವುದೇ ಚ್ಯುತಿ ಬಾರದೆ ಆದರ್ಶಗಳಿಗೆ ಬದ್ಧವಾಗಿ ಚಳುವಳಿಯನ್ನು ಮುಂದುವರೆಸಿಕೊಂಡು ಬಂದಿದೆ ಎಂದರು.
*ಶತಾಬ್ದಿ ಸ್ಮಾರಕ ಗ್ರಂಥ ಬಿಡುಗಡೆ
ಶತಾಬ್ದಿ ಸ್ಮಾರಕ ಗ್ರಂಥವನ್ನು ಸೈಯದ್ ಅಬ್ಬಾಸಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಅವರು ಕುನಿಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಸ್ಥಾಪಕಾಧ್ಯಕ್ಷ ಇಬ್ರಾಹಿಂ ಅಹ್ಮದ್ ಅಲಿ ಹಾಜಿ ಕುನಿಯ ಅವರುಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು.
ಶತಾಬ್ದಿ ಸ್ಮಾರಕ ಗ್ರಂಥವನ್ನು ಸಂಪಾದಕ ಅನ್ವರ್ ಸ್ವಾದಿಕ್ ಫೈಝಿ ತಾನೂರು ಪರಿಚಯಿಸಿದರು. ಶತಮಾನೋತ್ವದ ಅಂಗವಾಗಿ ಹೊರ ತಂದ ಪ್ರಮುಖ ಪುಸ್ತಕವನ್ನು ಕೇರಳ ಬಂದರು ಮತ್ತು ಪುರಾತತ್ವ ಇಲಾಖೆ ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ಅವರು ಅಬ್ದುಲ್ ಮಜೀದ್ ಹಾಜಿ ಕುಟ್ಟಿಕೋಲ್ ಅವರಿಗೆ ಹಸ್ತಾಂತರಿಸಿದರು.
ಶತಾಬ್ದಿ ವಿಶೇಷ ಸಂಚಿಕೆಯನ್ನು ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅವರು ಹದಾಬಾ ಗ್ರೂಪ್ ಆಫ್ ಕಂಪನೀಸ್, ಜಿದ್ದಾ ಸ್ಥಾಪಕಧ್ಯಕ್ಷ ಡಾ. ಇಸ್ಸುದ್ದೀನ್ ಹಾಜಿ ಕುಂಬಳ ಅವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು.
100 ಪತಾಕೆಗಳ ಧ್ವಜಾರೋಹಣ
ಬುಧವಾರ ಮಧ್ಯಾಹ್ನ ತಳಂಗರ ಮಾಲಿಕ್ ದಿನಾರ್ ನಿಂದ ಕುಣಿಯಾ ವರಕ್ಕಲ್ ಮುಲ್ಲಕ್ಕೋಯ ತಂಙಳ್ ನಗರ ವರೆಗೆ ವಿಖಾಯ ತಂಡದ ಜಾಥದೊಂದಿಗೆ ಘೋಷಯಾತ್ರೆ ನಡೆಯಿತು. ಸಂಜೆ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾದ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವದಲ್ಲಿ ಸಮಸ್ತ ಮುಶಾವರ ಸದಸ್ಯರು, ಸಾದಾತುಗಳು, ಪೋಷಕ ಸಂಘಟನೆಗಳ ನಾಯಕರ ಸಹಿತ ಗಣ್ಯರು 100 ಧ್ವಜಗಳನ್ನು ಧ್ವಜಾರೋಹಣ ಮಾಡಿದರು. ಈ ಸಂದರ್ಭ ಕುಂಬೋಳ್ ಕುಂಞಿ ಕೋಯ ತಂಙಳ್, ಸಮಸ್ತ ಪ್ರಧಾನ ಕಾರ್ಯದರ್ಶಿ ಶೈಖುನಾ ಆಲಿಕುಟ್ಟಿ ಉಸ್ತಾದ್ ಮತ್ತಿತರರು ಉಪಸ್ಥಿತರಿದ್ದರು.






