ಕೆಎಸ್ಸಾರ್ಟಿಸಿ ಬಸ್‌ಗೆ ಕಲ್ಲೆಸೆತ ಪ್ರಕರಣ: ಪೊಲೀಸ್ ವಿಚಾರಣೆ ಬಳಿಕ ಬಿಡುಗಡೆಗೊಂಡ ವ್ಯಕ್ತಿ ಆತ್ಮಹತ್ಯೆ

ಕಾಸರಗೋಡು: ನಿಲ್ಲಿಸದೆ ತೆರಳಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉಪ್ಪಳ ಸಮೀಪದ ಮಣ್ಣಂಗುಳಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು ಮಣ್ಣಂಕುಝಿ ನಿವಾಸಿ ಹಮೀದ್ ಅಲಿ (65) ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ತಲಪಾಡಿಯಲ್ಲಿ ಮಂಗಳೂರಿನಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸದ ಹಿನ್ನೆಲೆಯಲ್ಲಿ ಕಲ್ಲೆಸೆತ ನಡೆದಿತ್ತು. ಈ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ ಕಲ್ಲೆಸೆತ ಕರ್ನಾಟಕ ಗಡಿಯ ತಲಪಾಡಿಯಲ್ಲಿ ನಡೆದಿರುವುದು ದೃಢವಾದ ಹಿನ್ನೆಲೆಯಲ್ಲಿ ಉಳ್ಳಾಲ ಠಾಣಾ ಪೊಲೀಸರು ಹಮೀದ್ ಅಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ನೋಟಿಸ್ ನೀಡಿ ಬಿಡುಗಡೆಗೊಳಿಸಿದ್ದರು.
ರಾತ್ರಿ ತಲಪಾಡಿ ಗಡಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಬಂದ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ಲಿಸದ ಕಾರಣ ಕಲ್ಲೆಸೆದಿರುವುದಾಗಿ ಹೇಳಲಾಗಿದೆ.
ಬುಧವಾರ ಬೆಳಿಗ್ಗೆ ಮಲಪ್ಪುರಂನಲ್ಲಿ ವಾಸವಿರುವ ಪತ್ನಿ ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರಿಗೆ ಮಾಹಿತಿ ನೀಡಿದರು. ಪರಿಶೀಲನೆ ವೇಳೆ ಹಮೀದ್ ಅಲಿ ಮನೆಯೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರು ಅಸಹಜ ಮರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







