ಕುಂಬಳೆ: ಆರಿಕ್ಕಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ; ರಾ.ಹೆ 66ರಲ್ಲಿ ಸಂಚಾರ ಅಸ್ತವ್ಯಸ್ತ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿಯಲ್ಲಿ ಟೋಲ್ ಗೇಟ್ ಸ್ಥಾಪನೆ ಹಾಗೂ ಟೋಲ್ ಶುಲ್ಕ ವಸೂಲಾತಿಗೆ ವಿರೋಧವಾಗಿ ಟೋಲ್ ಗೇಟ್ ಹೋರಾಟ ಸಮಿತಿ ನಡೆಸಿದ ಪ್ರತಿಭಟನೆಯಿಂದ ಸೋಮವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.
ಸೋಮವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ನೂರಾರು ಪ್ರತಿಭಟನಾಕಾರರು ಆರಿಕ್ಕಾಡಿ ಟೋಲ್ ಪ್ಲಾಝಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಪರಿಣಾಮ, ಕುಂಬಳೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೀವ್ರ ಸಂಚಾರ ವ್ಯತ್ಯಯ ಉಂಟಾಯಿತು. ಕಚೇರಿ ಹಾಗೂ ಶಾಲಾ ಸಮಯದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರಿಗೆ ತೊಂದರೆಯಾಯಿತು.
ಕೇರಳ–ಕರ್ನಾಟಕ ಗಡಿಯಲ್ಲಿರುವ ತಲಪಾಡಿ ಟೋಲ್ ಗೇಟ್‌ನಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ತಾತ್ಕಾಲಿಕ ಟೋಲ್ ಪ್ಲಾಝಾದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್ ಸಂಗ್ರಹ ಆರಂಭಿಸಲು ಮುಂದಾದ ಮೊದಲ ದಿನವೇ ಪ್ರತಿಭಟನೆ ಭುಗಿಲೆದ್ದಿದೆ.
ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರ ನೇತೃತ್ವದ ಹೋರಾಟ ಸಮಿತಿ ಈ ಪ್ರತಿಭಟನೆಗೆ ನೇತೃತ್ವ ನೀಡಿದ್ದು, ಟೋಲ್ ಪ್ಲಾಝಾಗಳ ನಡುವೆ ಕನಿಷ್ಠ 60 ಕಿಲೋಮೀಟರ್ ಅಂತರ ಇರಬೇಕೆಂಬ ನಿಯಮವನ್ನು ಎನ್‌ಎಚ್‌ಎಐ ಕಡ್ಡಾಯವಾಗಿ ಪಾಲಿಸಬೇಕು ಎಂದು ಒತ್ತಾಯಿಸಿದೆ.
ಟೋಲ್ ಪ್ಲಾಜಾವನ್ನು ಪೆರಿಯ ಪಂಚಾಯತ್‌ನ ಚಾಲಿಂಗಲ್ ಪ್ರದೇಶಕ್ಕೆ ಸ್ಥಳಾಂತರಿಸದಿದ್ದರೆ, ಅಥವಾ ಕನಿಷ್ಠ ತಲಪಾಡಿ ಟೋಲ್ ಗೇಟ್‌ಗೆ ಸಮೀಪದ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಟೋಲ್ ಶುಲ್ಕ ವಿನಾಯಿತಿ ನೀಡದ ಹೊರತು, ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಈ ಸಂಬಂಧ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಅಂತಿಮ ತೀರ್ಪು ಹೊರಬರದ ಹಿನ್ನಲೆಯಲ್ಲಿ ಟೋಲ್ ಶುಲ್ಕ ವಸೂಲಿಗೆ ಮುಂದಾಗಿರುವುದೇ ಪ್ರತಿಭಟನೆಗೆ ಪ್ರಮುಖ ಕಾರಣವಾಗಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.







