ಕುಂಬಳೆ| ಆರಿಕ್ಕಾಡಿ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆ: ಟೋಲ್, ರಸ್ತೆ ಬಂದ್ ಮಾಡಿ ಆಕ್ರೋಶ

ಕಾಸರಗೋಡು: ಕುಂಬಳೆ ಆರಿಕ್ಕಾಡಿ ಯಲ್ಲಿ ಟೋಲ್ ಶುಲ್ಕ ವಸೂಲು ವಿರುದ್ಧದ ಹೋರಾಟ ಹಿಂಸಾತ್ಮಕ ರೂಪು ಪಡೆದಿದ್ದು, ಪ್ರತಿಭಟನಾಕಾರರು ಟೋಲ್ ಗೇಟ್ ನ ಕ್ಯಾಮರಾ ಹಾಗೂ ಗಾಜು ಪುಡಿ ಗೈದ ಘಟನೆ ಬುಧವಾರ ರಾತ್ರಿ ನಡೆದಿದೆ.
ಹೋರಾಟಕ್ಕೆ ಬೆಂಬಲ ವಾಗಿ ಕುಂಬಳೆ ಪೇಟೆಯಿಂದ ಬಂದ ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ಟೋಲ್ ಗೇಟ್ ನ ಕ್ಯಾಮರಾ ಗಳನ್ನು ಧ್ವಂಸ ಗೊಳಿಸಿದ್ದು, ಕಚೇರಿ ಗಾಜುಗಳನ್ನು ಹಾನಿ ಗೊಳಿಸಿದ್ದಾರೆ. ವಾಹನಗಳನ್ನು ತಡೆಯುವ ಟೋಲ್ ಬೂತ್ ನ ಹ್ಯಾಂಡಲ್ ಗಳನ್ನು ಪ್ರತಿಭಟನಾಕಾರರು ಕಿತ್ತೆಸೆದಿದ್ದಾರೆ. ಸ್ಕ್ಯಾನರ್ ಗಳಿಗೆ ಕಪ್ಪು ಸ್ಟಿಕ್ಕರ್ ಲಗತ್ತಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಹೆಚ್ಚುವರಿ ಪೊಲೀಸ್ ಪಡೆ ಸ್ಥಳಕ್ಕೆ ತಲುಪಿದೆ.
ಹಲವು ಯುವಜನ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ಕಚೇರಿಯೊಳಗೆ ನುಗ್ಗಲು ಯತ್ನಿಸಿದವರನ್ನು ಪೊಲೀಸರು ತಡೆದರು. ಪ್ರತಿಭಟನೆ ಹಿನ್ನಲೆಯಲ್ಲಿ ಸ್ಥಳದಲ್ಲಿ ಸೋಮವಾರ ದಿಂದ ಪೊಲೀಸರು ಟೋಲ್ ಗೇಟ್ ಗೆ ಭದ್ರತೆ ಕಲ್ಪಿಸಿದ್ದು, ಈ ನಡುವೆ ಬುಧವಾರ ರಾತ್ರಿ ನಡೆದ ಪ್ರತಿಭಟನಾ ಜಾಥಾ ದಲ್ಲಿ ಸಾವಿರಕ್ಕೂ ಅಧಿಕ ಪ್ರತಿಭಟನಾ ಕರಾರು ಪಾಲ್ಗೊಂಡರು. ಇದರಿಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪರದಾಡುವಂತೆ ಮಾಡಿತು. ಘಟನೆ ಬಳಿಕ ವಾಹನ ಗಳು ಟೋಲ್ ಶುಲ್ಕ ಇಲ್ಲದೆ ಸಂಚಾರ ನಡೆಸುತ್ತಿದೆ.
ಟೋಲ್ ಶುಲ್ಕ ವಿರುದ್ಧ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕೆ.ಇಂಪಾ ಶೇಖರ್ ನೇತೃತ್ವದ ಲ್ಲಿ ಬುಧವಾರ ಸಂಜೆ ನಡೆದ ಸಭೆ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ವಿಫಲಗೊಂಡಿತ್ತು. ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ರವರ ಸಮ್ಮುಖದಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದು ಕೊಳ್ಳುವ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಆದರೆ ಪ್ರಕರಣ ಹೈಕೋರ್ಟ್ ವಿಚಾರಣೆ ಯಲ್ಲಿರುವುದರಿಂದ ಅಂತಿಮ ತೀರ್ಮಾನ ಹೊರಬೀಳುವ ತನಕ ಟೋಲ್ ಶುಲ್ಕ ವಸೂಲಿ ಸ್ಥಗಿತಗೊಳಿವಂತೆ ಶಾಸಕ ಅಶ್ರಫ್ ಒತ್ತಾಯಿಸಿದ್ದರು
ಸೋಮವಾರ ಬೆಳಿಗ್ಗೆಯಿಂದ ಟೋಲ್ ಶುಲ್ಕ ವಸೂಲು ವಿರುದ್ಧ ಹೋರಾಟ ನಡೆಯುತ್ತಿದ್ದು, ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸತ್ಯಾಗ್ರಹಕ್ಕೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಬೆಂಬಲ ಸೂಚಿಸಿದ್ದು, ಸತ್ಯಾಗ್ರಹ ಸ್ಥಳಕ್ಕೆ ಮೆರವಣಿಗೆ ನಡೆಸಿವೆ. ಈ ನಡುವೆ ಬುಧವಾರ ರಾತ್ರಿ ಯುವಜನ ಪಕ್ಷಗಳು ನಡೆಸಿದ ಪ್ರತಿಭಟನಾ ಜಾಥಾ ತೀವ್ರ ಸ್ವರೂಪ ಪಡೆದುಕೊಂಡಿದೆ. ಶುಲ್ಕ ವಸೂಲು ರದ್ದುಗೊಳಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದು ಸಮಿತಿ ಮುನ್ನೆಚ್ಚರಿಕೆ ನೀಡಿದೆ.







