ಮಂಜೇಶ್ವರ: ಹೊಸಂಗಡಿಯಲ್ಲಿ ಕರ್ನಾಟಕ ಮೂಲದ ಕಾರ್ಮಿಕನ ಕೊಲೆ

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿ ಸಮೀಪದ ಅಂಗಡಿಪದವಿನಲ್ಲಿ ಕರ್ನಾಟಕ ಮೂಲದ ಕಾರ್ಮಿಕರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ.
ಉತ್ತರ ಕರ್ನಾಟಕದ ವಿಜಯನಗರ (ಹೊಸಪೇಟೆ) ಜಿಲ್ಲೆಯ ಲಿಂಗನಾಯಕನಹಳ್ಳಿ ನಿವಾಸಿ ರಮೇಶ್ ಯಾನೆ ಸತೀಶ್ (38) ಕೊಲೆಯಾದ ವ್ಯಕ್ತಿ.
ಅಂಗಡಿಪದವಿನ ನರಸಿಂಹ ಮೂರ್ತಿ ಎಂಬವರಿಗೆ ಸೇರಿದ ಹಳೆಯ ಎರಡು ಅಂತಸ್ತಿನ ಮನೆಯ ಕೋಣೆಯಲ್ಲಿ ಈ ಕೃತ್ಯ ನಡೆದಿದೆ. ಈ ಹಳೆಯ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಕೃಷ್ಣಪ್ಪ ಎಂಬವರು ಅಡುಗೆ ಕೋಣೆಗೆ ತೆರಳಿದಾಗ ರಮೇಶ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.
ವಿಷಯ ತಿಳಿದ ತಕ್ಷಣ ಎಎಸ್ಪಿ ಅಶೋಕ್ ಅಚ್ಯುತ್ ಹಾಗೂ ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ತನಿಖೆ ನಡೆಸಿದೆ.
ಮೃತನ ತಲೆ ಸಂಪೂರ್ಣ ಜಜ್ಜಿದ ಸ್ಥಿತಿಯಲ್ಲಿದ್ದು, ದೇಹದ ಇತರೆಡೆಗಳಲ್ಲೂ ತೀವ್ರವಾದ ಗಾಯಗಳಾಗಿವೆ. ಅಡುಗೆ ಕೋಣೆಯಲ್ಲಿದ್ದ ತೂಕದ ರುಬ್ಬುವ ಕಲ್ಲಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಇದೇ ಕಲ್ಲಿನಿಂದ ತಲೆಗೆ ಜಜ್ಜಿ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆಯಾದ ರಮೇಶ್ ಬೇರೆಡೆಯೇ ವಾಸವಿದ್ದುಕೊಂಡು ಕೂಲಿ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಅವರು ಊರಿಗೆ ಹೋಗಿ ಮರಳಿದ್ದರು ಎನ್ನಲಾಗಿದೆ. ಆದರೆ, ಘಟನೆ ನಡೆದ ದಿನ ರಮೇಶ್ ಅವರನ್ನು ಈ ಮನೆಗೆ ಕರೆದುಕೊಂಡು ಬಂದಿದ್ದ ಕರ್ನಾಟಕ ಮೂಲದ ಮತ್ತೊಬ್ಬ ವ್ಯಕ್ತಿ ಪ್ರಸ್ತುತ ನಾಪತ್ತೆಯಾಗಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸತೀಶ್ ಈ ಮನೆಗೆ ಬರಲು ಕಾರಣವೇನು ಹಾಗೂ ಕೊಲೆಗೆ ನಿಖರವಾದ ಹಿನ್ನೆಲೆ ಏನು ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ.
ಪೊಲೀಸರು ಸ್ಥಳ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






