ಮಂಜೇಶ್ವರ: ತಾಯಿಯನ್ನು ಕೊಂದು ಸುಟ್ಟು ಹಾಕಿದ ಮಗ; ಆರೋಪಿ ಪರಾರಿ

ಹಿಲ್ಡಾ | ಮೆಲ್ವಿನ್
ಕಾಸರಗೋಡು :ಸ್ವತಃ ಮಗನೇ ತಾಯಿಯನ್ನು ಕೊಂದು ಬೆಂಕಿ ಹಚ್ಚಿ ಸುಟ್ಟು ಹಾಕಿದ ಪೈಶಾಚಿಕ ಕೃತ್ಯ ವರ್ಕಾಡಿಯಲ್ಲಿ ನಡೆದಿರುವ ಬಗ್ಗೆ ಗುರುವಾರ ವರದಿಯಾಗಿದೆ.
ವರ್ಕಾಡಿ ನಲ್ಲೆಂಗಿಯ ದಿ. ಲೂಯಿಸ್ ಮೊಂತೇರೋ ರವರ ಪತ್ನಿ ಹಿಲ್ಡಾ ಮೊಂತೇರೊ ( 59) ಕೊಲೆಗೀಡಾದವರು. ನೆರೆಮನೆಯ ಸಂಬಂಧಿಕರಾದ ವಿಕ್ಟರ್ ರವರ ಪತ್ನಿ ಲೋಲಿಟಾ ( 30) ಅವರಿಗೂ ಗಂಭೀರ ಸುಟ್ಟ ಗಾಯಗಳಾಗಿವೆ.
ಆರೋಪಿ ಮೆಲ್ವಿನ್ ಮೊಂತೇರೊ ( 26) ಕೃತ್ಯ ನಡೆಸಿದ ಬಳಿಕ ಆಟೋ ರಿಕ್ಷಾದಲ್ಲಿ ಪರಾರಿಯಾಗಿದ್ದಾನೆ. ಹಿಲ್ಡಾ ಮತ್ತು ಮೆಲ್ವಿನ್ ಮಾತ್ರ ಮನೆಯಲ್ಲಿ ವಾಸವಾಗಿದ್ದರು. ಇನ್ನೋರ್ವ ಪುತ್ರ ಆಲ್ವಿನ್ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಆಲ್ವಿನ್ ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕಾಗಿ ಕುವೈತ್ ಗೆ ತೆರಳಿದ್ದರು. ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದ ಹಿಲ್ಡಾ ರನ್ನು ಗುರುವಾರ ಮುಂಜಾನೆ ಕೊಲೆಗೈದು ಬಳಿಕ ಮನೆಯ ಹಿಂಬದಿಗೆ ಕೊಂಡೊಯ್ದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಮನೆಯಲ್ಲಿ ಮಲಗಿದ್ದ ತಾಯಿಯನ್ನು ಕೊಲೆಗೈದ ಬಳಿಕ ಮನೆಯ ಹಿಂಭಾಗಕ್ಕೆ ಕೊಂಡೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುಟ್ಟು ಕರಕಲಾದ ಮೃ ತದೇಹವನ್ನು ಮನೆಯ ನೂರು ಮೀಟರ್ ದೂರದ ಪೊದೆಗಳೆಡೆಗೆ ಎಸೆದ ಆರೋಪಿ ಮೆಲ್ವಿನ್ ಸಂಬಂಧಿಕರಾದ ಲೋಲಿಟಾರ ಮನೆಗೆ ಬಂದು ತಾಯಿ ನಾಪತ್ತೆಯಾಗಿರುವುದಾಗಿ ತಿಳಿಸಿದ್ದ. ಗಾಬರಿಗೊಂಡು ಮನೆಗೆ ಬಂದಾಗ ಲೋಲಿಟಾರಿಗೂ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಲೋಲಿಟಾ ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃತ್ಯದ ಬಳಿಕ ಆರೋಪಿ ಆಟೋರಿಕ್ಷಾ ಮೂಲಕ ಹೊಸಂಗಡಿಗೆ ತಲಪಿ ಅಲ್ಲಿಂದ ಮಂಗಳೂರಿಗೆ ಬಸ್ಸು ಮೂಲಕ ಪರಾರಿಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆರೋಪಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದನು. ಮಂಜೇಶ್ವರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ