ವಿಮಾನ ದುರಂತದಲ್ಲಿ ಮಡಿದ ಕೇರಳದ ನರ್ಸ್ ಬಗ್ಗೆ ಮಾನಹಾನಿಕರ ಪೋಸ್ಟ್: ವೆಳ್ಳರಿಕುಂಡು ಉಪ ತಹಶೀಲ್ದಾರ್ ಪವಿತ್ರನ್ ಬಂಧನ

ಪವಿತ್ರನ್
ಕಾಸರಗೋಡು : ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಕೇರಳ ಮೂಲದ ನರ್ಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ ಆರೋಪದಲ್ಲಿ ವೆಳ್ಳರಿಕುಂಡು ತಾಲೂಕು ಉಪ ತಹಶೀಲ್ದಾರ್ ಎ.ಪವಿತ್ರನ್ರನ್ನು ಪೊಲೀಸರು ಬಂಧಿಸಿದ್ದಾರೆ.
ಇದಕ್ಕೂ ಮೊದಲು ಪವಿತ್ರನ್ರನ್ನು ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ನೀಡಿತ್ತು.
ಉಪ ತಹಶೀಲ್ದಾರ್ ಎ.ಪವಿತ್ರನ್ ಫೇಸ್ ಬುಕ್ನಲ್ಲಿ ಲಂಡನ್ನಲ್ಲಿ ನರ್ಸ್ ಆಗಿದ್ದ ಪತ್ತನಂತಿಟ್ಟ ಜಿಲ್ಲೆಯ ರಂಜಿತಾ ನಾಯರ್ ಅವರ ಉದ್ಯೋಗ ಹಾಗೂ ಜಾತಿಯ ಬಗ್ಗೆ ಕೀಳಾಗಿ ಅವಮಾನಕರವಾಗಿ ಪೋಸ್ಟ್ ಹಾಕಿದ್ದರು. ಇದು ವಿವಾದ ಆಗುತ್ತಿದ್ದಂತೆ ಫೇಸ್ ಬುಕ್ ಪೋಸ್ಟ್ ನ್ನು ಡಿಲಿಟ್ ಮಾಡಿದ್ದರು. ಆದರೆ ಇದರ ಸ್ಟೀನ್ ಶಾಟ್ ಗಳು ಸಾಮಾಜಿಕ ತಾಣಗಳಲ್ಲಿ ಶೇರ್ ಆಗಿದ್ದವು.
ಈ ಬಗ್ಗೆ ವರದಿ ನೀಡುವಂತೆ ಕಾಸರಗೋಡು ಜಿಲ್ಲಾಧಿಕಾರಿಗೆ ರಾಜ್ಯ ಕಂದಾಯ ಸಚಿವ ಕೆ. ರಾಜನ್ ಆದೇಶಿಸಿದ್ದರು. ಜಿಲ್ಲಾಧಿಕಾರಿ ನೀಡಿದ ವರದಿಯಂತೆ ಪವಿತ್ರನ್ ರನ್ನು ಸೇವೆಯಿಂದ ಶುಕ್ರವಾರ ಅಮಾನತು ಮಾಡಲಾಗಿತ್ತು.
ಬಂಧನ: ನರ್ಸ್ ರಂಜಿತಾ ನಾಯರ್ ಬಗ್ಗೆ ಸಾಮಾಜಿಕ ಜಾತಾಣದಲ್ಲಿ ಅವಮಾನಕರ ಪೋಸ್ಟ್ ಹಾಕಿದ ಉಪ ತಹಶೀಲ್ದಾರ್ ಎ.ಪವಿತ್ರನ್ ವಿರುದ್ಧ ಮಹಿಳಾ ಸಂಘಟನೆಗಳು ಪೊಲೀಸ್ ದೂರು ನೀಡಿದ್ದವು. ದೂರಿನನ್ವಯ ಪವಿತ್ರನ್ ರನ್ನು ಶುಕ್ರವಾರ ಸಂಜೆ ವೆಳ್ಳರಿಕುಂಡು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕರನ್ನು ನಿಂದಿಸಿ ಅಮಾನತಾಗಿದ್ದ ಪವಿತ್ರನ್!
ಈ ಹಿಂದೆ ಕೂಡಾ ಪವಿತ್ರನ್ ಇಂತಹ ಹಲವು ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಈ ಬಗ್ಗೆ ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಮುನ್ನೆಚ್ಚರಿಕೆ ನೀಡಿದ್ದರು.
ಕಾಞಂಗಾಡ್ ಶಾಸಕ ಇ.ಚಂದ್ರಶೇಖರ್ರನ್ನು ನಿಂದಿಸಿದ ಆರೋಪದಲ್ಲಿ ಪವಿತ್ರನ್ ರನ್ನು ಅಮಾನತು ಗೊಳಿಸಲಾಗಿತ್ತು. ಎರಡು ತಿಂಗಳ ಬಳಿಕ ಮುನ್ನೆಚ್ಚರಿಕೆ ನೀಡಿ ಸೇವೆಗೆ ಮರು ಸೇರ್ಪಡೆಗೊಳಿಸಲಾಗಿತ್ತು.







