ಕಾಸರಗೋಡು: ಪ್ರವಾಹಕ್ಕೆ ಸಿಲುಕಿ ಬಾಲಕ ಮೃತ್ಯು

(ಸುಲ್ತಾನ್)
ಕಾಸರಗೋಡು : ಬಾಲಕನೋರ್ವ ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಘಟನೆ ಬಂದ್ಯೋಡು ಸಮೀಪದ ಕೊಕ್ಕೆಜಾಲ್ ನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಕೊಕ್ಕೆಜಾಲ್ ನಿವಾಸಿ ಸಾದತ್ ಎಂಬವರ ಪುತ್ರ ಸುಲ್ತಾನ್ (7) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಮನೆಯ ಸಮೀಪ ಆಟವಾಡುತ್ತಿದ್ದ ಬಾಲಕ ನಾಪತ್ತೆಯಾಗಿದ್ದು, ಇದರಿಂದ ಮನೆಯವರು ಗಾಬರಿಗೊಂಡು ಶೋಧ ನಡೆಸಿದ್ದು, ಪತ್ತೆಯಾಗಲಿಲ್ಲ.
ಸಮೀಪದ ತೋಡಿನಲ್ಲಿ ಕೊಚ್ಚಿ ಹೋಗಿರಬಹುದು ಎಂಬ ಬಗ್ಗೆ ಸಂಶಯ ಉಂಟಾದುದರಿಂದ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ಶೋಧ ನಡೆಸಿದ್ದು, ಮನೆಯಿಂದ 500 ಮೀಟರ್ ದೂರದ ತೋಡಿನ ಪೊದೆಗೆ ಸಿಲುಕಿ ಬಾಲಕ ಪತ್ತೆಯಾಗಿದ್ದು, ಕೂಡಲೇ ಬಂದ್ಯೋಡಿನ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ. ಮನೆ ಸಮೀಪವೇ ತೋಡು ಹಾದುಹೋಗುತ್ತಿದ್ದು, ಆಕಸ್ಮಿಕವಾಗಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಈತ ಉಪ್ಪಳ ನಯಾಬಝಾರ್ ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದನು.
Next Story