ಮಂಜೇಶ್ವರದಲ್ಲಿ ಪೋಷಣ್ ಮೇಳ; ಪೌಷ್ಟಿಕ ಆಹಾರಗಳ ಪ್ರದರ್ಶನ

ಮಂಜೇಶ್ವರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಐಸಿಡಿಎಸ್ ಮಂಜೇಶ್ವರ ಕಚೇರಿಯ ನೇತೃತ್ವದಲ್ಲಿ ʼಪೋಷಣ್ ಮಾ–2026ʼರ ಅಂಗವಾಗಿ ಪೋಷಣ್ ಮೇಳ ಮಂಗಳವಾರ ನಡೆಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಉದ್ಘಾಟಿಸಿದರು. ಮಂಜೇಶ್ವರ ಐಸಿಡಿಎಸ್ ವ್ಯಾಪ್ತಿಯ 126 ಅಂಗನವಾಡಿಗಳ ಕಾರ್ಯಕರ್ತರು ಭಾಗವಹಿಸಿದ ಮೆರವಣಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರು ಸ್ವತಃ ತಯಾರಿಸಿದ ವಿವಿಧ ಪೌಷ್ಟಿಕ ಆಹಾರಗಳ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರ–ಕಿಶೋರಿಯರಲ್ಲಿ ಕಂಡುಬರುವ ಪೌಷ್ಟಿಕಾಂಶದ ಕೊರತೆಯನ್ನು ನಿವಾರಿಸುವುದು ಪೋಷಣ್ ಮಾಸಾಚರಣೆಯ ಮುಖ್ಯ ಉದ್ದೇಶವಾಗಿದೆ.
ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕಮಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಬ್ಲಾಕ್ ಪಂಚಾಯತ್ ಸದಸ್ಯರಾದ ಬಶೀರ್ ಕುಟ್ಟೂಡಲ್, ಜ್ಯೋತಿ ಪಿ. ರೈ ಹಾಗೂ ಸೂಪರ್‌ವೈಸರ್ ಬಿಂದು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬ್ಲಾಕ್ ಪಂಚಾಯತ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಿಡಿಪಿಒ ಗೀತಾ ಕುಮಾರಿ ಸ್ವಾಗತಿಸಿದರು. ಸೂಪರ್‌ವೈಸರ್ ಸುಚಿತ ವಂದಿಸಿದರು.






