ಕಾಸರಗೋಡಿನಲ್ಲಿ ಖಾಸಗಿ ಬಸ್ ಮುಷ್ಕರ ಆರಂಭ

ಕಾಸರಗೋಡು: ಹಲವು ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ಸಂಚಾರ ಸ್ಥಗಿತ ಗೊಳಿಸಿ ಮುಷ್ಕರ ನಡೆಸುತ್ತಿವೆ. ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ 'ಪ್ರಿಯದರ್ಶಿನಿ' ಯೋಜನೆಯಿಂದಾಗಿ ತಮಗೆ ಉಂಟಾಗುತ್ತಿರುವ ಭಾರಿ ಆರ್ಥಿಕ ನಷ್ಟವನ್ನು ಪ್ರತಿಭಟಿಸಿ ಬಸ್ ಮಾಲಕರ ಫೆಡರೇಶನ್ ಈ ಮುಷ್ಕರಕ್ಕೆ ಕರೆ ನೀಡಿದೆ.
ಬೇಡಿಕೆಗಳು: ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ನೀಡಲಾಗಿರುವ ಉಚಿತ ಪ್ರಯಾಣ ಸೌಲಭ್ಯದಿಂದಾಗಿ ಖಾಸಗಿ ಬಸ್ ಗಳ ದಿನದ ಕಲೆಕ್ಷನ್ ಅರ್ಧಕ್ಕಿಂತ ಹೆಚ್ಚು ಕುಸಿದಿದೆ. ಹಾಗಾಗಿ, ಉಚಿತ ಪ್ರಯಾಣವನ್ನು ಕೇವಲ ವಿದ್ಯಾರ್ಥಿಗಳು ಮತ್ತು 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾತ್ರ ಸೀಮಿತಗೊಳಿಸಬೇಕು. ಖಾಸಗಿ ಬಸ್ಗಳಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಡೀಸೆಲ್ ಒದಗಿಸಬೇಕು. ಬಸ್ಗಳ ಮೇಲಿನ ರಸ್ತೆ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಖಾಸಗಿ ಬಸ್ ಕಾರ್ಮಿಕರ ಕಲ್ಯಾಣ ನಿಧಿಯ ಪೂರ್ಣ ಮೊತ್ತದ ಕಂತನ್ನು ಸರಕಾರವೇ ಭರಿಸಬೇಕ ಎಂದು ಒತ್ತಾಯಿಸಿ ಮುಷ್ಕರ ನಡೆಸಲಾಗುತ್ತಿದೆ.
ಮುಷ್ಕರದಿಂದ ಕೆಎಸ್ಸಾರ್ಟಿಸಿ ಬಸ್ಸು ಗಳ ಸಂಚಾರ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣಿಕರು ಸಮಸ್ಯೆಗೆ ಸಿಲುಕಿದ್ದಾರೆ. ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಇನ್ನಿತರ ಪ್ರಯಾಣಿಕರು ಸಮಸ್ಯೆಗೆ ಒಳಗಾಗಿದ್ದಾರೆ
ಬದಿಯಡ್ಕ - ಮುಳ್ಳೇರಿಯಾ, ಪೆರ್ಲ - ಕುಂಬಳೆ, ಪೆರ್ಮುದೆ - ಬಂದ್ಯೋಡು , ಮಂಜೇಶ್ವರ - ಮೀಯಪದವು, ವರ್ಕಾಡಿ, ಉಪ್ಪಳ - ಬಾಯಾರು ಹಾಗೂ ಕಾಸರಗೋಡು - ಅಡೂರು ಹಾಗೂ ಇನ್ನಿತರ ಗ್ರಾಮೀಣ ಪ್ರದೇಶಗಳ ಪ್ರಯಾಣಿಕರಿಗೆ ಮುಷ್ಕರದ ಬಿಸಿ ತಟ್ಟಿದೆ.
ಮಾಲಕರ ಸಂಘಟನೆ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ಹಾಗೂ ಧರಣಿ ನಡೆಸಲಿದೆ.






