ಕಾಸರಗೋಡು ಜಿಲ್ಲೆಯಲ್ಲಿ ರೆಡ್ ಅಲರ್ಟ್ : ಪ್ರವಾಸಿ ತಾಣಗಳು ಬಂದ್, ಸಾರ್ವಜನಿಕರಿಗೆ ಕಟ್ಟೆಚ್ಚರ

ಸಾಂದರ್ಭಿಕ ಚಿತ್ರ
ಕಾಸರಗೋಡು: ಭಾರಿ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಕಾಸರಗೋಡು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಡಳಿತವು ತಕ್ಷಣದಿಂದಲೇ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಿದೆ.
ಜಿಲ್ಲೆಯ ಪ್ರಸಿದ್ಧ ಗಿರಿಧಾಮವಾದ ರಾಣಿಪುರಂ ಸೇರಿದಂತೆ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳಿಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಭಾರಿ ಮಳೆಯಿಂದ ನದಿಗಳು, ಹೊಳೆಗಳು, ತೋಡುಗಳು ಹಾಗೂ ಜಲಪಾತಗಳಲ್ಲಿ ನೀರಿನ ಹರಿವು ಅಪಾಯದ ಮಟ್ಟ ತಲುಪಿರುವುದರಿಂದ ಯಾವುದೇ ಕಾರಣಕ್ಕೂ ನೀರಿಗೆ ಇಳಿಯಬಾರದು, ಈಜಾಡಬಾರದು ಹಾಗೂ ಸೆಲ್ಫಿ ತೆಗೆಯಲು ಹೋಗಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಮಣ್ಣಿನ ತೇವಾಂಶ ಹೆಚ್ಚಿರುವ ಕಾರಣ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಎಲ್ಲಾ ಗ್ರಾನೈಟ್ ಕ್ವಾರಿಗಳು ಹಾಗೂ ಗಣಿಗಾರಿಕೆ ಚಟುವಟಿಕೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಗುಡ್ಡಗಾಡು ಮತ್ತು ಘಾಟಿ ಪ್ರದೇಶಗಳಲ್ಲಿ ಭೂಕುಸಿತದ ಭೀತಿ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಲಾಗಿದೆ.
ಅಲ್ಲದೆ, ಸಮುದ್ರದಲ್ಲಿ ಬಲವಾದ ಗಾಳಿ ಮತ್ತು ಎತ್ತರದ ಅಲೆಗಳು ಏಳುತ್ತಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಹಾಗೂ ಸಾರ್ವಜನಿಕರು ಕಡಲತೀರಗಳಿಗೆ ಭೇಟಿ ನೀಡದಂತೆ ಜಿಲ್ಲಾಡಳಿತ ಮನವಿ ಮಾಡಿದೆ.






