ರಾಜ್ಯ ಬಜೆಟ್‌ನಲ್ಲಿ ರಾಯಚೂರು ಅಭಿವೃದ್ಧಿಗೆ 200 ಕೋಟಿ ರೂ.: ಮೂಲಸೌಕರ್ಯ ಸುಧಾರಣೆಯ ನಿರೀಕ್ಷೆ; ಭರದಿಂದ ಸಾಗಿದೆ ಕಾಮಗಾರಿಗಳು

ರಾಯಚೂರು: ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ರಾಜ್ಯ ಬಜೆಟ್‌ನಲ್ಲಿ ನೂತನ ರಾಯಚೂರು ಮಹಾನಗರ ಪಾಲಿಕೆಗೆ 200 ಕೋಟಿ ಅನುದಾನ ಬಿಡುಗಡೆಯಾಗಿದ್ದು, ನಗರದ ಅಭಿವೃದ್ಧಿಗೆ ಹೊಸ ನಿರೀಕ್ಷೆ ಮೂಡಿಸಿದೆ.
ಕಳೆದ ವರ್ಷವೇ ಪಾಲಿಕೆಗೆ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ ಅನುದಾನ ನೀಡಲು ಪಾಲಿಕೆಯಿಂದ ಮನವಿ ಮಾಡಲಾಗಿತ್ತು ಹಾಗೂ ವಿವಿಧ ಕಾಮಗಾರಿಗಳ ನೀಲಿನಕ್ಷೆ ತಯಾರಿಸಲಾಗಿತ್ತು. ಪಾಲಿಕೆಯ ಪ್ರಕಾರ ಈ ಹಿಂದೆ 200 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿತ್ತು ಅದರಂತೆ ಪ್ರಸ್ತುತ 2026-27ನೇ ಸಾಲಿನಲ್ಲಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ರಾಯಚೂರು ನಗರವು ವೇಗವಾಗಿ ವಿಸ್ತರಿಸುತ್ತಿದ್ದರೂ ಮೂಲಸೌಕರ್ಯ ಅಭಿವೃದ್ಧಿ ಅಗತ್ಯ ಮಟ್ಟದಲ್ಲಿ ನಡೆಯದಿರುವುದು ಹಲವು ವರ್ಷಗಳಿಂದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ನಗರದ ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಹಾಳಾಗಿರುವುದು, ಮಳೆ ಬಂದಾಗ ನೀರು ನಿಲ್ಲುವ ಸಮಸ್ಯೆ, ಸಮರ್ಪಕ ಒಳಚರಂಡಿ ವ್ಯವಸ್ಥೆಯ ಕೊರತೆ, ಸ್ಟೇಷನ್ ರಸ್ತೆ, ಬಸವೇಶ್ವರ ರಸ್ತೆ, ಜಿಪಂಮುಂಭಾಗ, ಚಂದ್ರಮೌಳೇಶ್ವರ ರಸ್ತೆ,
ಗಂಜ್ ರಸ್ತೆ ಸೇರಿ ಹಲವೆಡೆ ಫುಟ್‌ಪಾತ್ ಅತುಕ್ರಮಣದಿಂದ ಪಾದಾಚಾರಿಗಳಿಗೆ ನಡೆದಾಡಲು ಸಮಸ್ಯೆ ಇದೆ. ಜನಸಂಖ್ಯೆ ಹೆಚ್ಚಳ, ವಾಹನಗಳ ಓಡಾಟಗಳ ಸಂಖ್ಯೆಯೂ ಹೆಚ್ಚಾದರೂ ರಸ್ತೆಗಳ ಅಗಲೀಕರಣ ಆಗುತ್ತಿಲ್ಲ, ಆದರೆ ರಾಯಚೂರು ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಪಾಲಿಕೆಯ ಆಯುಕ್ತ ಜುಬೀನ್ ಮೊಹಾಪಾತ್ರ, ಜಿಲ್ಲಾಧಿಕಾರಿ ನಿತಿಶ್.ಕೆ ಅವರು ವಿಶೇಷ ಕಾಳಜಿಯಿಂದ ಅನೇಕ ಸುಧಾರಣೆಯಾಗಿದೆ. ಈಗ ಬಜೆಟ್‌ನಲ್ಲಿ 200ಕೋಟಿ ರೂ. ಬಿಡುಗಡೆಯಾಗಿದ್ದು ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ. ನಗರದಲ್ಲಿನ ಸ್ಲಂ ಪ್ರದೇಶ, ಪ್ರತಿಷ್ಠಿತರ ಕಾಲನಿ ಎಂದು ಹೇಳುವ ನಿಜಲಿಂಗಪ್ಪ ಕಾಲನಿ, ಆಜಾದ್ ನಗರ, ಸ್ಟೇಷನ್ ರಸ್ತೆ, ಮಂತ್ರಾಲಯ ರಸ್ತೆ, ಆಶಾಪುರ ರಸ್ತೆಯ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಅಧಿಕಾರಿಗಳು, ರಾಜಕೀಯ ಗಣ್ಯ ವ್ಯಕ್ತಿಗಳು ವಾಸವಾಗಿದ್ದರು ಕೂಡ ಹದಗೆಟ್ಟ ರಸ್ತೆಯಿಂದ ಬಡಾವಣೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಜನರಿಗೆ ತೊಂದರೆ ಉಂಟಾಗುತ್ತಿದೆ. ಹೊಸ ಡ್ರೈನೇಜ್ ವ್ಯವಸ್ಥೆ ನಿರ್ಮಾಣ ಹಾಗೂ ಹಳೆಯ ಒಳಚರಂಡಿಗಳ ದುರಸ್ತಿ ಮಾಡಿದರೆ ಈ ಸಮಸ್ಯೆ ಕಡಿಮೆಯಾಗಲಿದೆ ಎಂದು ನಾಗರಿಕರು ನಿರೀಕ್ಷಿಸಿದ್ದಾರೆ.
ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯಲ್ಲಿಯೂ ಸುಧಾರಣೆಯಾಗಬೇಕಿದೆ. ಕೆಲವು ಪ್ರದೇಶಗಳಲ್ಲಿ ನೀರಿನ ಪೈಪ್‌ಲೈನ್ ಹಳೆಯದಾಗಿ,ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಹಲವೆಡೆ ಚರಂಡಿ ಪಕ್ಕದಲ್ಲೇ ನಳದ ಪೈಪ್‌ಲೈನ್ ಇರುವುದರಿಂದ ಕಲುಷಿತ ನೀರು ಪೂರೈಕೆ ಆಗುತ್ತಿದೆ ಎಂಬ ಆರೋಪವಿದೆ. ಪಾಲಿಕೆಯ ಗಮನಕ್ಕೂ ಬಂದಿದ್ದು ಸರಿಪಡಿಸುವ ಕೆಲಸ ನಡೆಯುತ್ತಿದೆ.
ಭರದಿಂದ ಸಾಗಿದ ರಸ್ತೆ ಕಾಮಾಗಾರಿಗಳು: ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ಈಗಾಗಲೇ ನಗರದ ರಾಂಪೂರ ರಸ್ತೆಯಲ್ಲಿ ಡಾಂಬರೀಕರಣ, ಎಲ್‌ಬಿಎಸ್ ನಗರದಿಂದ ಆಶ್ರಯ ಕಾಲನಿಗೆ ಹೋಗುವ ರಸ್ತೆಯ ಎರಡು ಬದಿಯಲ್ಲಿ ಪಾದಚಾರಿ ಮಾರ್ಗ, ಸ್ಲ್ಯಾಬ್ ಅಳವಡಿಕೆ, ಸಿಯತಲಾಬ್ ಹಾಗೂ ಭಂಗಿಕುಂಟಾ ಮತ್ತಿತರೆಡೆ ರಾಜಕಾಲುವೆ ಸ್ವಚ್ಛತೆ,ಹಲವೆಡೆ ಒಳಚರಂಡಿ ಕಾಮಗಾರಿ, ಪ್ರಮುಖ ರಸ್ತೆಗಳಲ್ಲಿ ಧೂಳು ನಿಯಂತ್ರಣ, ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಿ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿದೆ.
ಸಚಿವರ, ವಿಧಾನ ಪರಿಷತ್ ಸದಸ್ಯರ ಸಹಕಾರದಿಂದ ಅನುದಾನ: ಮಹಾನಗರ ಪಾಲಿಕೆಯಾದ ಬಳಿಕ ಒತ್ತುವರಿಯಾಗಿ ನಶಿಸುತ್ತಿದ್ಧ ಮಾವಿನಕೆರೆ ಅಭಿವೃದ್ಧಿಗೆ ಸಚಿವ ಎನ್.ಎಸ್ ಬೋಸರಾಜು ಅವರಿಂದ ಕಾಯಕಲ್ಪ ಸಿಕ್ಕಿದೆ, ಹಲವು ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ವಿಧಾನಪರಿಷತ್ ಸದಸ್ಯ ಎ.ವಸಂತ ಕುಮಾರ ಅವರು ತಮ್ಮ ಕ್ಷೇತ್ರದ ಅನುದಾನದಿಂದ ನೆರವಾಗುತ್ತಿದ್ದಾರೆ. ಆದರೆ ರಿಂಗ್ ರಸ್ತೆಯ ಬಹಳ ಅವಶ್ಯಕತೆ ಇದ್ದರೂ ಕೈತಪ್ಪಿದ್ದು ಶಾಸಕ ಡಾ.ಶಿವರಾಜ ಪಾಟೀಲರು ತಾವು ವಿರೋಧ ಪಕ್ಷದಲ್ಲಿರುವುದರಿಂದಲೇ ನನ್ನ ಕ್ಷೇತ್ರಕ್ಕೆ ಹೆಚ್ಚಿನಯೋಜನೆ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ಈಗ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಭ್ರಷ್ಟಾಚಾರ ರಹಿತ ಆಡಳಿತ,ಕಾಮಗಾರಿ ನಡೆಸಿದರೆ ತಕ್ಕ ಮಟ್ಟಿಗೆ ಅಭಿವೃದ್ಧಿ ಆಗಬಹುದು ಎಂದು ನಾಗರಿಕರ ಅಭಿಪ್ರಾಯವಾಗಿದೆ.
ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ರಾಂಪೂರ ಕೆರೆಯ ಕುಡಿಯುವ ನೀರು ಶುದ್ಧೀಕರಣ ಘಟಕದ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಜೊತೆಗೆ ರಾಂಪೂರ ರಸ್ತೆ ಸೇರಿದಂತೆ ನಗರದಲ್ಲಿನ ಹಲವೆಡೆ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯವೂ ಪ್ರಗತಿಯಲ್ಲಿದೆ. ನಗರದಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯವರ್ಧನೆಗೆ ಸಂಬಂಧಿಸಿದ ಕಾರ್ಯಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಸ್ಥಳಗಳ ಸುಧಾರಣೆ ಮಾಡಲಾಗುವುದು.
-ಜುಬಿನ್ ಮೊಹಪಾತ್ರ
ಮಹಾನಗರಪಾಲಿಕೆಯಆಯುಕ್ತರು







