ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಜನ್ಮ ಶತಮಾನೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ
ಯುವ ಪೀಳಿಗೆಯನ್ನು ಕಲೆ, ಸಂಸ್ಕೃತಿಯತ್ತ ಸೆಳೆಯಬೇಕು: ಡಾ. ವಿ. ಬಾಲಕೃಷ್ಣನ್

ಕಾಸರಗೋಡು: ದೇಶದ ಯುವ ಪೀಳಿಗೆಯನ್ನು ಕಲೆ, ಸಂಸ್ಕೃತಿಯತ್ತ ಸೆಳೆಯುವಲ್ಲಿ ಇಂತಹ ಸಾಂಸ್ಕೃತಿಕ ಸಂಸ್ಥೆಗಳು ಪ್ರಯತ್ನಿಸಬೇಕು ಎಂದು ಕಾಸರಗೋಡು ಡಿವೈಎಸ್ಪಿ ಡಾ. ವಿ. ಬಾಲಕೃಷ್ಣನ್ ಹೇಳಿದರು.
ಕಲೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರಕ್ಕೆ ಸಿರಿಬಾಗಿಲು ಪ್ರತಿಷ್ಠಾನವು ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ಅವರ ಸಂಸ್ಥೆಯ ಪದಾಧಿಕಾರಿಗಳ ನೇತೃತ್ವದಲ್ಲಿ ಕಾಳಜಿಯಿಂದ ಇಂತಹ ಕಲಾಕ್ಷೇತ್ರವನ್ನು ರೂಪೀಕರಿಸಿ ಕಾರ್ಯಕ್ರಮ ನಡೆಸುವುದು ಬಹಳ ಸಂತೋಷದ ವಿಷಯ. ಇದು ಕೇವಲ ಕಲಾಕ್ಷೇತ್ರ ಮಾತ್ರವಲ್ಲದೆ ರಿಸರ್ಚ್ ಸೆಂಟರ್ ಆಗಿ ಬೆಳೆಯುತ್ತಿದೆ. ಬೆಳೆಯಬೇಕು. ದೇಶದ 40ರಿಂದ 50 ಶೇಕಡ ಯುವಕರನ್ನು ಅನ್ಯ ದೇಶೀಯರು ದಾರಿ ತಪ್ಪಿಸಲು ಪ್ರಯತ್ನಿಸುವ ಈ ಕಾಲದಲ್ಲಿ, ದಾರಿ ತಪ್ಪದಂತೆ ಜಾಗೃತಿವಹಿಸಿ ನಮ್ಮ ಕಲೆಯತ್ತ ಸೆಳೆದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ನವೆಂಬರ್ 6ರಂದು ಶುಕ್ರವಾರ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಬಡಗುತಿಟ್ಟಿನ ಖ್ಯಾತ ಬಣ್ಣದ ವೇಷಧಾರಿ ಸಕ್ಕಟ್ಟು ಲಕ್ಷ್ಮಿನಾರಾಯಣಯ್ಯ ಅವರ ಜನ್ಮ ಶತಮಾನೋತ್ಸವದ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಥಕ್ಕಳಿ ಹಾಗೂ ಯಕ್ಷಗಾನವನ್ನು ಯುವ ಪೀಳಿಗೆಯತ್ತ ನಾವಾಗಿ ಕೊಂಡೊಯ್ಯುವುದು ಕಲೆಯನ್ನು ಬೆಳೆಸುವುದರ ಜೊತೆಗೆ ಯುವ ಪೀಳಿಗೆಯು ದುಶ್ಚಟಗಳಿಗೆ ಬಲಿ ಬೀಳದಂತೆ ಜಾಗೃತಿ ವಹಿಸಲು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಾದ ನಾಟ್ಯರತ್ನ ಕಣ್ಣನ್ ಪಾಟಾಳಿ ಕಥಕ್ಕಳಿ ಅಧ್ಯಯನ ಕೇಂದ್ರವು ಜೊತೆಗೂಡಿ ಕಾರ್ಯ ಪ್ರವೃತ್ತರಾಗೋಣ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಎಂ. ಪ್ರಭಾಕರ ಜೋಶಿ ಅವರು ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಅವರ ಸಂಸ್ಮರಣೆಯನ್ನು ನೆರವೇರಿಸಿದರು. ಕಟೀಲು ಮೇಳದ ಹಿರಿಯ ಬಣ್ಣದ ವೇಷದಾರಿ ಶ್ರೀ ಹರಿನಾರಾಯಣ ಭಟ್ ಎಡನೀರು ಇವರಿಗೆ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಜನ್ಮ ಶತಮಾನೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಡಾ. ವೈಕುಂಠ ಹೇರಳೆ ಸಾಸ್ತಾನ ಇವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಅವರ ಸುಪುತ್ರ ಶ್ರೀ ಮಂಜುನಾಥಯ್ಯ ಸಕ್ಕಟ್ಟು ವಹಿಸಿದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರು ಕಾರ್ಯಕ್ರಮ ಸಂಯೋಜನೆ ಮಾಡಿ, ಸಂಚಾಲಕರಾದ ಉಜಿರೆ ಅಶೋಕ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಅದಕ್ಕೂ ಮೊದಲು ಹರಿನಾರಾಯಣ ಭಟ್ ಎಡನೀರು ಇವರಿಂದ ಬಣ್ಣದ ವೇಷಗಳ ಪ್ರಾತ್ಯಕ್ಷಿಕೆ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ಶ್ರೀಹರಿಭಕ್ತಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಹೊಸಮೂಲೆ ಗಣೇಶ ಭಟ್, ಅಡೂರು ಲಕ್ಷ್ಮೀನಾರಾಯಣರಾವ್, ಬೆಳಾಲು ಗಣೇಶ ಭಟ್ ಭಾಗವಹಿಸಿದರು. ಅರ್ಥಧಾರಿಗಳಾಗಿ ಡಾ. ಜೋಶಿ, ಉಜಿರೆ, ವೈಕುಂಠ ಹೇರ್ಳೆ ಭಾಗವಹಿಸಿದರು.
ಯಕ್ಷಗಾನ ತಾಳಮದ್ದಳೆ ಪ್ರಾಯೋಜಕತ್ವವನ್ನು ಯಕ್ಷ ಮಿತ್ರರು ಕುಕ್ಕೆ ಸುಬ್ರಹ್ಮಣ್ಯ ಅವರು ವಹಿಸಿ ಪ್ರೋತ್ಸಾಹಿಸಿದರು. ಎಲೆ ಮರೆಯ ಕಾಯಿಯಂತಿದ್ದು ಯಕ್ಷಗಾನ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಯಕ್ಷ ಮಿತ್ರರು ಸುಬ್ರಹ್ಮಣ್ಯ ಇವರ ಮುಖಂಡರಾದ ಶ್ರೀ ಶಿವರಾಮ ಭಟ್ ಅವರನ್ನು ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು.






