ಸಮಸ್ತ ನೂರನೇ ವರ್ಷದ ಸಂಭ್ರಮ: ಕಾಸರಗೋಡಿನ ಕುಣಿಯದಲ್ಲಿ ಭರದ ಸಿದ್ಧತೆ

ಕುಣಿಯ (ಕಾಸರಗೋಡು): ಸಮಸ್ತ ಕೇರಳ ಜಮೀಯ್ಯತುಲ್ ಉಲಮಾದ ನೂರನೇ ವರ್ಷದ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗಿರುವ ಬೃಹತ್ ಅಂತರಾಷ್ಟ್ರೀಯ ಮಹಾಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಕುಣಿಯದಲ್ಲಿ ನಿರ್ಮಿಸಲಾಗಿರುವ 'ವರಕ್ಕಲ್ ಮುಲ್ಲಕ್ಕೋಯ ತಂಙಳ್ ನಗರ'ದಲ್ಲಿ ಫೆ. 4 ರಿಂದ 8 ರವರೆಗೆ ನಡೆಯಲಿದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಕೇರಳ, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳು, ಲಕ್ಷದ್ವೀಪ ಹಾಗೂ ವಿದೇಶಗಳಿಂದ ಗಣ್ಯರು, ನಾಯಕರು ಮತ್ತು ಲಕ್ಷಾಂತರ ಕಾರ್ಯಕರ್ತರು ಆಗಮಿಸಲಿದ್ದಾರೆ.
ಜಾಗತಿಕ ಎಕ್ಸ್ಪೋ ಮತ್ತು ಮಹಿಳೆಯರಿಗೆ ಅವಕಾಶ:-
ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿರುವ 'ಗ್ಲೋಬಲ್ ಎಕ್ಸ್ಪೋ' ಜ.30ರ ಸಂಜೆ ಉದ್ಘಾಟನೆಗೊಳ್ಳಲಿದೆ. ಎಕ್ಸ್ಪೋ ವೀಕ್ಷಣೆಗಾಗಿ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವೆಂದರೆ, ಜನವರಿ 31 ಮತ್ತು ಫೆಬ್ರವರಿ 1 ರಂದು ಮಹಿಳೆಯರಿಗೆ ಮಾತ್ರ ಎಕ್ಸ್ಪೋ ವೀಕ್ಷಿಸಲು ಅವಕಾಶ ನೀಡಲಾಗಿದ್ದು, ಆ ದಿನಗಳಲ್ಲಿ ಸಂಪೂರ್ಣ ಪೆವಿಲಿಯನ್ ಮಹಿಳಾ ಸ್ವಯಂಸೇವಕರ ನಿಯಂತ್ರಣದಲ್ಲಿರಲಿದೆ. ಫೆಬ್ರವರಿ 2 ರಿಂದ 8 ರವರೆಗೆ ಪುರುಷರಿಗೆ ಪ್ರವೇಶವಿರುತ್ತದೆ.
100 ಧ್ವಜಗಳ ಮೆರವಣಿಗೆ:-
ಈಜಿಪ್ಟ್ ಸೇರಿದಂತೆ ವಿವಿಧ ದೇಶಗಳು ಮತ್ತು ಭಾರತದ ವಿವಿಧ ರಾಜ್ಯಗಳಿಂದ ತರಲಾದ 100 ಧ್ವಜಗಳು ಫೆಬ್ರವರಿ 4 ರಂದು ಕುಣಿಯ ತಲುಪಲಿವೆ. ಕೋಝಿಕೋಡ್ ನ ವರಕ್ಕಲ್ ನಲ್ಲಿರುವ ಶಂಸುಲ್ ಉಲಮಾ ಇ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಅವರ ಮಖಾಮಿನಿಂದ ದ ತರಲಾಗುವ ಈ ಧ್ವಜಗಳನ್ನು ತಳಂಗರೆಯ ಮಲಿಕ್ ಇಬ್ನು ದೀನಾರ್ ಮಖಾಮಿಗೆ ತಲುಪಿಸಿ, ಅಲ್ಲಿಂದ ಭವ್ಯ ಮೆರವಣಿಗೆಯ ಮೂಲಕ ಸಮ್ಮೇಳನ ನಗರಿಗೆ ತರಲಾಗುವುದು. ಧ್ವಜಾರೋಹಣದೊಂದಿಗೆ ಕ್ಯಾಂಪ್ ಸೆಷನ್ಗಳಿಗೆ ಚಾಲನೆ ಸಿಗಲಿದೆ.
ಬೃಹತ್ ಪ್ರತಿನಿಧಿ ಶಿಬಿರ:-
* ಆನ್ಲೈನ್ ಮೂಲಕ ಆಯ್ಕೆಯಾದ 33,313 ಪ್ರತಿನಿಧಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
* ಫೆಬ್ರವರಿ 4 ರಿಂದ 6ರವರೆಗೆ 10,000 ಪ್ರತಿನಿಧಿಗಳಿಗೆ 'ದಾಈ' ಶಿಬಿರ.
* ಫೆಬ್ರವರಿ 6 ರಿಂದ 8ರವರೆಗೆ 23,313 ಪ್ರತಿನಿಧಿಗಳನ್ನೊಳಗೊಂಡ ಜನರಲ್ ಕ್ಯಾಂಪ್.
ವಿವಿಧ ವಿಷಯಗಳ ಕುರಿತು ಪ್ರಮುಖ ವಿದ್ವಾಂಸರು ತರಗತಿಗಳನ್ನು ನಡೆಸಿಕೊಡಲಿದ್ದಾರೆ. ಇದರೊಂದಿಗೆ ಸಮ್ಮೇಳನ ನಗರಿಯ ಹಾಲ್ಗಳಲ್ಲಿ ಅಂತರಾಷ್ಟ್ರೀಯ ಸೆಮಿನಾರ್ ಗಳು ನಡೆಯಲಿವೆ.
ಸುಸಜ್ಜಿತ ವ್ಯವಸ್ಥೆ ಮತ್ತು ಭದ್ರತೆ:-
ಆರೋಗ್ಯ ಸೇವೆ: ಸಮ್ಮೇಳನ ನಗರಿಯಲ್ಲಿ 30 ಹಾಸಿಗೆಗಳ ತಾತ್ಕಾಲಿಕ ಚಿಕಿತ್ಸಾ ಕೇಂದ್ರ, ವೈದ್ಯರು ಮತ್ತು ಸಿಬ್ಬಂದಿ ಲಭ್ಯವಿರುತ್ತಾರೆ. ತುರ್ತು ಚಿಕಿತ್ಸೆಗಾಗಿ 20 ಅಂಬುಲೆನ್ಸ್ ಗಳನ್ನು ನಿಯೋಜಿಸಲಾಗಿದೆ.
ಅಗ್ನಿಶಾಮಕ ದಳ: ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಮೊಕ್ಕಾಂ ಹೂಡಲಿವೆ.
ಊಟೋಪಚಾರ: ಶಿಬಿರದ ಪ್ರತಿನಿಧಿಗಳಿಗೆ ನುರಿತ ತಜ್ಞರ ಮೇಲ್ವಿಚಾರಣೆಯಲ್ಲಿ ಸಿದ್ಧಪಡಿಸಿದ ಆಹಾರ ಮತ್ತು ಕುಡಿಯುವ ನೀರನ್ನು ಪೂರೈಸಲಾಗುವುದು.
ಸ್ವಯಂಸೇವಕರು: ಸುಗಮ ಸಂಚಾರ ಮತ್ತು ಜನದಟ್ಟಣೆ ನಿಯಂತ್ರಿಸಲು 3,313 'ವಿಖಾಯ' ಸ್ವಯಂಸೇವಕರು ಹಾಗೂ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಲಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಸಮಸ್ತದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಹಾಗೂ ಸ್ಥಳೀಯ ಸ್ವಾಗತ ಸಮಿತಿಯವರು ಹಗಲಿರುಳು ಸಿದ್ಧತೆಯಲ್ಲಿ ತೊಡಗಿದ್ದಾರೆ. ವಿಶೇಷವೆಂದರೆ, ಜಾತಿ-ಮತ ಮತ್ತು ರಾಜಕೀಯ ಭೇದವಿಲ್ಲದೆ ಕುಣಿಯದ ಸುತ್ತಮುತ್ತಲಿನ ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿದ್ದಾರೆ.
ವರದಿ : ಯೂಸುಫ್ ಮುಂಡೋಲೆ







