ಯಕ್ಷಗಾನದ ಪರಂಪರೆಯನ್ನು ಮುಂದುವರೆಸುವಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಪಾತ್ರ ಮಹತ್ವದ್ದು: ಎಡನೀರು ಸ್ವಾಮಿ

ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರತಿಯೊಂದು ಕಾರ್ಯಕ್ರಮಗಳು ಅರ್ಥಪೂರ್ಣ. ಹಿಂದಿನ ಯಕ್ಷಗಾನದ ಪರಂಪರೆಯನ್ನು ಇಂದಿನ ಯುವಜನತೆಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದು ಎಡನೀರು ಮಠಾಧೀಶರಾದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಲಾವಿದರ ಸನ್ಮಾನ-ಯಕ್ಷಗಾನ ಪ್ರದರ್ಶನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಯಕ್ಷಗಾನ ಪ್ರದರ್ಶನಗಳಿಗೆ ಮಾತ್ರ ಮೀಸಲಿರಿಸದೇ ಅಧ್ಯಯನಕ್ಕಾಗಿ ಹಲವು ಕಮ್ಮಟಗಳು, ಶಿಬಿರಗಳು, ಕನ್ನಡ ಸಾಹಿತ್ಯಪರ ಚಟುವಟಿಕೆಗಳು, ವೈದ್ಯಕೀಯ ಶಿಬಿರಗಳು, ಪುಸ್ತಕ ಪ್ರಕಾಶನ ಮುಂತಾದ ಕಾರ್ಯಕ್ರಮಗಳ ಜತೆ ಪ್ರತಿಷ್ಠಾನ ಒಂದು ಅಕಾಡೆಮಿಕ್ ಚಿಂತನೆಯೊಂದಿಗೆ ಕಾರ್ಯಾಚರಿಸುತ್ತಿರುವುದು ಸಂತೋಷದ ವಿಚಾರ ಎಂದರು.
ಶ್ರೀ ಧರ್ಮಸ್ಥಳ ಮೇಳದಲ್ಲಿ 50 ವರ್ಷಗಳಿಂದ ನಿರಂತರ ಕಲಾ ಸೇವೆ ಮಾಡುತ್ತಿರುವ ವಸಂತ ಗೌಡ ಕಾಯರ್ತಡ್ಕ ಅವರನ್ನು ಮತ್ತು ಹಿರಿಯ ಬಣ್ಣದ ವೇಷದಾರಿ ಮಾಧವ ಪಾಟಾಳಿ ನೀರ್ಚಾಲು ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಗಡಿನಾಡು ಕಾಸರಗೋಡಿನ ರಂಗಭೂಮಿಯ ಹಿರಿಯ ಕಲಾವಿದ, ಸಂಘಟಕ, ಚಲನಚಿತ್ರ ನಟ ಕಾಸರಗೋಡು ಚಿನ್ನಾ, "ತನ್ನ ಸ್ವಾರ್ಥವನ್ನು ಬಯಸದೆ ಕಲೆಯಲ್ಲಿ ದುಡಿಯುವ ಕಲಾವಿದ, ತನ್ನ ವೃತ್ತಿಯ ಜೊತೆ, ತಾನು ದುಡಿಯುವ ಯಕ್ಷಗಾನ ಕ್ಷೇತ್ರಕ್ಕಾಗಿ ತನ್ನ ಮನೆಯ ಪರಿಸರವನ್ನು ಕಲೆಗೆ ಸಮರ್ಪಿಸಿದ ಕಾಸರಗೋಡಿನ ಕಲಾವಿದ ರಾಮಕೃಷ್ಣ ಮಯ್ಯ ಸಿರಿಬಾಗಿಲು" ಎಂದು ತಿಳಿಸಿದರು. ಕಲಾಭಿಮಾನಿಗಳ ಸದಾ ಪ್ರೋತ್ಸಾಹ ಇಂತಹ ಕಲಾವಿದರಿಗೆ, ಸಂಘಟನೆಗೆ ಅಗತ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವಿನಯರಾಜ ಶೆಟ್ಟಿ ಚಿಪ್ಪಾರುಗುತ್ತು, ಸಹಾಯಕ ಮೆಟೀರಿಯಲ್ಸ್ ಮೆನೇಜರ್ ಎಂ.ಯನ್.ಪಿ.ಎ. ಮಂಗಳೂರು ಹಾಗೂ ಕುದ್ರೆಪ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾಗಿರುವ ರಾಮಚಂದ್ರ ಪೆಜತ್ತಾಯ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಶಾಂತ್ ಕುಂಜಾಲು, ಮೈಸೂರು ದಂಪತಿಗಳನ್ನು ಪ್ರತಿಷ್ಠಾನದ ವತಿಯಿಂದ ಪೂಜ್ಯ ಶ್ರೀಗಳು ಮಂತ್ರಾಕ್ಷತೆಯೊಂದಿಗೆ ಗೌರವಿಸಿದರು.
ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ಜಗದೀಶ್ ಕೆ. ಕೂಡ್ಲು ಕಾರ್ಯಕ್ರಮ ನಿರ್ವಹಿಸಿದರು, ಪ್ರಸನ್ನ ಕೃಷ್ಣ ಕಾರಂತ ದೇಶಮಂಗಲ, ಶ್ರೀರಾಜ ಮಯ್ಯ ಸಹಕರಿಸಿದರು.
ತದನಂತರ ಪ್ರತಿಷ್ಠಾನದ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರ ತಂಡದಿಂದ ‘ಶನೀಶ್ವರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು.







