ಕಾಸರಗೋಡಿನಲ್ಲಿ ಜೂ.29ರಂದು ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ 5ನೇ ಸಮ್ಮೇಳನ

ಕಾಸರಗೋಡು: ಕನ್ನಡ ಚುಟುಕು ಸಾಹಿತ್ಯ ಪರಿಷತ್ ಹುಬ್ಬಳ್ಳಿ ಇವರ ಅಂತರ್-ರಾಜ್ಯ ಮಟ್ಟದ 5ನೇ ಸಮ್ಮೇಳನ ರವಿವಾರ ಜೂ.29ರಂದು ಪರಿಷತ್ತಿನ ಕಾಸರಗೋಡು ಘಟಕ, ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಹಾಗೂ ಮೈಸೂರಿನ ಅಭಿರುಚಿ ಬಳಗ ಇವರ ಸಹಯೋಗದೊಂದಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.
ಹಿರಿಯ ಪತ್ರಕರ್ತರಾದ ರಾಧಾಕೃಷ್ಣ ಉಳಿಯತ್ತಡ್ಕರು ಬೆಳಗ್ಗೆ 10 ಗಂಟೆಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಹಿರಿಯ ಚಿಂತಕರಾದ ವಿ.ಬಿ.ಕುಳಮರ್ವ ಹಾಗೂ ಮುಖ್ಯ ಅತಿಥಿಗಳಾಗಿ ಜ್ಯೋತಿಷ್ಯ ಪಂಡಿತರಾದ ವಿದ್ವಾನ್ ರಘುಪತಿ ಭಟ್ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಪರಿಷತ್ತಿನ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ, ಕಾಸರಗೋಡು ಜಿಲ್ಲಾಧ್ಯಕ್ಷರಾದ ವೆಂಕಟ ಭಟ್ಟ, ಉಡುಪಿ ಜಿಲ್ಲಾಧ್ಯಕ್ಷರಾದ ಪ್ರೊಫ಼ೆಸರ್ ಜಿ.ಯು. ನಾಯಕರು ಉಪಸ್ಥಿತರಿರುತ್ತಾರೆ.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಮುಖ್ಯಸ್ಥರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯರಿಂದ ಚುಟುಕು ಸಾಹಿತ್ಯ ಪುಸ್ತಕಗಳು ಅನಾವರಣಗೊಳ್ಳಲಿವೆ.
ಮಧ್ಯಾಹ್ನ 11:30ಕ್ಕೆ ಶಿರಸಿಯ ಯಕ್ಷಗಾನತಜ್ಞರಾದ ಗಣಪತಿ ಭಟ್, ವರ್ಗಾಸರ, ಇವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಟಿ ನಡೆಯಲಿದೆ. ಕವಿಗೋಷ್ಟಿಯು ಮಧ್ಯಾಹ್ನ 12:30ಕ್ಕೆ ಮಂಗಳೂರಿನ ಹಿರಿಯ ಕವಿಗಳಾದ ಡಾ.ಸುರೇಶ್ ನೆಲಗುಳಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಅವನೀಶ ಎಸ್.ನೀಲಗುಂದ, ಉಣಕಲ್, ಇವರ 'ಮಯೂರಶರ್ಮನ' ಏಕಪಾತ್ರಾಭಿನಯ; 1:30ರಿಂದ 2 ಗಂಟೆ ವರೆಗೆ ಕಾಸರಗೋಡಿನ ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರಿಂದ 'ನೃತ್ಯ-ಸಂಗೀತ ವೈಭವ' ಹಾಗೂ ಮಧ್ಯಾಹ್ನ 2:30ಕ್ಕೆ ಯಕ್ಷಗಾನ ತಾಳಮದ್ದಲೆ (ಪ್ರಸಂಗ: 'ಹರಿಸರ್ವೋತ್ತಮ') ನಡೆಯಲಿದೆ.