ಶಿಕ್ಷಣದ ಜೊತೆಗೆ ಉತ್ತಮ ಗುಣನಡತೆ, ಸೇವಾ ಮನೋಭಾವ, ನ್ಯಾಯಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು: ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ
‘ದಿ ನೆಕ್ಸ್ಟ್’ ಸಮಗ್ರ ನಾಯಕತ್ವ ತರಬೇತಿ ಶಿಬಿರ

ಮಲಪ್ಪುರಂ: ಧಾರ್ಮಿಕ ಮೌಲ್ಯಗಳು, ಮಾನವೀಯತೆ ಮತ್ತು ಕರ್ತವ್ಯ ಪ್ರಜ್ಞೆಯನ್ನು ಹೊಸ ತಲೆಮಾರಿಗೆ ವರ್ಗಾಯಿಸುವುದೇ ನೈಜ ನಾಯಕತ್ವದ ತಳಹದಿ. ಶಿಕ್ಷಣದ ಜೊತೆಗೆ ಉತ್ತಮ ಗುಣನಡತೆ, ಸೇವಾ ಮನೋಭಾವ ಮತ್ತು ನ್ಯಾಯಪ್ರಜ್ಞೆಯನ್ನು ಯುವಕರು ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿತ್ವಗಳನ್ನು ರೂಪಿಸುವ ಮೂಲಕ ಮಾತ್ರ ಮೌಲ್ಯಾಧಾರಿತ ನಾಯಕತ್ವವನ್ನು ಬೆಳೆಸಲು ಸಾಧ್ಯ ಎಂದು ಸಮಸ್ತ ಉಲಮಾ ಒಕ್ಕೂಟದ ಕಾರ್ಯದರ್ಶಿ ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ ಹೇಳಿದರು.
ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್)ವು ಮಲಪ್ಪುರಂನ ಮಅದಿನ್ ಎಜ್ಯು ಕ್ಯಾಂಪಸ್‌ನಲ್ಲಿ ಆಯೋಜಿಸಿದ ‘ದಿ ನೆಕ್ಸ್ಟ್’ ಸಮಗ್ರ ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೂರು ದಿನಗಳ ಕಾಲ ನಡೆದ ಶಿಬಿರದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್, ಸದಸ್ಯರಾದ ಅಬ್ದುಲ್ಲಾ ಅಹ್ಸನಿ ಚೆಂಗಾನಿ, ಎಸ್.ವೈ. ಎಸ್ ಕೇರಳ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ಹಕೀಂ ಅಝ್ಹರಿ, ಕಾರ್ಯದರ್ಶಿ ರಹ್ಮತುಲ್ಲಾ ಸಖಾಫಿ ಎಳಮರಂ, ಪ್ರಮುಖರಾದ ಸಯ್ಯಿದ್ ಜಲಾಲುದ್ದೀನ್ ಬುಖಾರಿ ಮಳ್ಹರ್, ಸುಲೈಮಾನ್ ಸಖಾಫಿ ಮಾಳಿಯೇಕಲ್, ಅಲೀ ಬಾಖವಿ ಆಟುಪುರಂ, ಸುಲೈಮಾನ್ ಫೈಝಿ ಕೀಶ್ಶೇರಿ, ಇಬ್ರಾಹೀಂ ಬಾಖವಿ ಮೇಲ್ಮುರಿ, ಕೆ ಎಂ ಸಖಾಫಿ ಪರವೂರು, ಡಾ. ಎಮ್ಮೆಸ್ಸಂ ಝೈನಿ ಕಾಮಿಲ್, ಸಾದಿಕ್ ಸಖಾಫಿ ಪೆರಿಂತಾಟಿರಿ, ಅನಸ್ ಅಮಾನಿ, ಸಾದಿಕ್ ಮಾಸ್ಟರ್ ವೆಳಿಮುಕ್ಕ್, ಕಲಾಂ ಮಾವೂರ್, ಮುಬಶ್ಶಿರ್ ಅದನಿ, ಡಾ. ನೂರುದ್ದೀನ್ ರಾಝಿ, ಸಿರಾಜುದ್ದೀನ್ ಸಖಾಫಿ, ಉಮರ್ ಓಂಗಲ್ಲೂರು, ಅಕ್ಬರ್ ಅಲಿ ಮೊದಲಾದವರು ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಿದರು.
ಸಯ್ಯಿದ್ ಶಾಫಿ ನಈಮಿ ತಂಙಳ್ ಪ್ರಾರ್ಥನೆ ನಡೆಸಿದರು. ಸಯ್ಯಿದ್ ಅಹ್ಮದ್ ಕಬೀರ್ ಅಲ್ ಬುಖಾರಿ, ಮಅದಿನ್ ಮ್ಯಾನೇಜರ್ ದುಲ್ಫುಕರ್ ಸಖಾಫಿ, ಉದ್ಯಮಿ ಮುಹಮ್ಮದ್ ಹಾಜಿ ಸಾಗರ ಮತ್ತಿತರರು ಉಪಸ್ಥಿತರಿದ್ದರು.
ಜಾಮಿಯಾ ಮರ್ಕಝ್‌ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಅಬೂಬಕರ್ ಮುಸ್ಲಿಯಾರ್ ಸಮಾರೋಪ ಭಾಷಣ ಮಾಡಿದರು. ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು. ಕೆ ಎಂ ಅಬೂಬಕರ್ ಸಿದ್ದೀಖ್ ಸ್ವಾಗತಿಸಿ, ಅನಸ್ ಸಿದ್ದೀಖಿ ಬೆಂಗಳೂರು ಧನ್ಯವಾದವಿತ್ತರು.






