ಮಂಗಳೂರು – ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ತಾತ್ಕಾಲಿಕ ಮುಂದೂಡಿಕೆ

ಕಾಸರಗೋಡು: ಮಂಗಳೂರು–ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಮಾರ್ಗದ ಕುಂಬಳೆಯ ಆರಿಕ್ಕಾಡಿ ಟೋಲ್ ಪ್ಲಾಝಾದಲ್ಲಿ ಶುಲ್ಕ ಸಂಗ್ರಹ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಹೈಕೋರ್ಟ್ ತೀರ್ಪು ಹೊರಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ತಿಳಿಸಿದ್ದಾರೆ.
ಪ್ರತಿಭಟನೆಗಳ ಹಿನ್ನಲೆಯಲ್ಲಿ ಬುಧವಾರದಿಂದ ಆರಂಭವಾಗಬೇಕಿದ್ದ ಟೋಲ್ ಶುಲ್ಕ ವಸೂಲಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಶಾಸಕ ಎ.ಕೆ.ಎಂ. ಅಶ್ರಫ್ ತಿಳಿಸಿದ್ದಾರೆ.
ಟೋಲ್ ಗೇಟ್ ವಿರುದ್ಧ ಹೋರಾಟ ಸಮಿತಿ ಹೈಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿಯ ವಿಚಾರಣೆ ನವೆಂಬರ್ 14ರಂದು ನಡೆಯಲಿದ್ದು, ಅಂತಿಮ ತೀರ್ಪು ಬರುವವರೆಗೆ ಶುಲ್ಕ ವಸೂಲು ನಡೆಸದಿರಲು ಸೂಚನೆ ನೀಡಲಾಗಿದೆ ಎಂದು ಶಾಸಕರು ಹೇಳಿದರು.
ಶುಲ್ಕ ವಸೂಲು ಕ್ರಮದ ವಿರುದ್ಧ ಸ್ಥಳೀಯರು ಕಳೆದ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಮಂಗಳವಾರ ಸಂಜೆ ಹೋರಾಟ ಸಮಿತಿ ತುರ್ತು ಸಭೆ ಸೇರಿ ಮುಂದಿನ ಹೋರಾಟದ ತಂತ್ರ ರೂಪಿಸಿತ್ತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಹೈಕೋರ್ಟ್ ತೀರ್ಪು ಬರುವ ತನಕ ಟೋಲ್ ಸಂಗ್ರಹವನ್ನು ಮುಂದೂಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ಬುಧವಾರ ಬೆಳಿಗ್ಗೆ 8 ಗಂಟೆಯ ನಂತರ ಟೋಲ್ ದರ ಸಂಗ್ರಹಿಸಲಾಗುವುದು ಎಂದು ಈ ಹಿಂದೆ ಮಾಹಿತಿ ನೀಡಲಾಗಿತ್ತು.







