Uppala | ಕೆರೆಗೆ ಬಿದ್ದು ಕಾರ್ಮಿಕ ಮೃತ್ಯು

ಮಂಜೇಶ್ವರ: ಕಾರ್ಮಿಕರೊಬ್ಬರು ಮನೆ ಸಮೀಪದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಉಪ್ಪಳ ಸಮೀಪದ ಕೊಂಡೆವೂರು ಎಂಬಲ್ಲಿ ನಡೆದಿದೆ.
ಕೊಂಡೆವೂರಿನ ಸಂದೀಪ್ ಶೆಟ್ಟಿ(44) ಮೃತಪಟ್ಟವರು.
ಅವರು ಸೋಮವಾರ ಬೆಳಗ್ಗೆ ಎಂದಿನಂತೆ ಉಪ್ಪಳದ ಶಾರದಾ ನಗರದಲ್ಲಿರುವ ಸೋಡಾ ಕಾರ್ಖಾನೆಯ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಮಧ್ಯಾಹ್ನವಾದರೂ ಅವರು ಕೆಲಸದ ಸ್ಥಳಕ್ಕೆ ತಲುಪದ ಹಿನ್ನೆಲೆಯಲ್ಲಿ ಆತಂಕಗೊಂಡ ಸ್ನೇಹಿತರು ಅವರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಯತ್ನಿಸಿದ್ದಾರೆ. ಫೋನ್ ಕರೆಗೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಸ್ಥಳೀಯರು ಮತ್ತು ಹಾಗೂ ಸಂಬಂಧಿಕರು ಹುಡುಕಾಟ ಆರಂಭಿಸಿದ್ದಾರೆ.
ಹುಡುಕಾಟದ ವೇಳೆ ಮನೆಯ ಸಮೀಪದ ತೋಟದಲ್ಲಿದ್ದ ಕೆರೆಯ ಅಂಚಿನಲ್ಲಿ ಸಂದೀಪ್ ಅವರ ಅಂಗಿ ಪತ್ತೆಯಾಗಿದೆ. ಅವರು ಕೆರೆಗೆ ಬಿದ್ದಿರಬಹುದು ಎಂದು ಶಂಕಿಸಿದ ಸ್ಥಳೀಯರು ತಕ್ಷಣ ಮಂಜೇಶ್ವರ ಪೊಲೀಸ್ ಮತ್ತು ಉಪ್ಪಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿದರು.
ಸಂದೀಪ್ ಅವರ ಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ಮೋಟರ್ ಅನ್ನು ಇದೇ ಕೆರೆಯಲ್ಲಿ ಅಳವಡಿಸಲಾಗಿತ್ತು. ಮೋಟರ್ ನ ಫುಟ್ ವಾಲ್ವ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ದೋಷವನ್ನು ಸರಿಪಡಿಸಲು ಕೆರೆಗೆ ಇಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮಂಜೇಶ್ವರ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.






