ಉಪ್ಪಳ: ಅನಾರೋಗ್ಯದಿಂದ ಮೃತಪಟ್ಟ ನಾರಾಯಣರ ಅಂತ್ಯಸಂಸ್ಕಾರ ನೆರವೇರಿಸಿದ ಜಿಪಂ ಸದಸ್ಯೆ ಇರ್ಫಾನಾ

ಕಾಸರಗೋಡು, ಜೂ.27: ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನಿಧನರಾದ ಮೀಂಜ ಸಮೀಪದ ಚಿಗುರುಪಾದೆಯ ನಾರಾಯಣ (64) ಎಂಬವರ ಅಂತ್ಯಕ್ರಿಯೆ ನೆರವೇರಿಸಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಇಕ್ಬಾಲ್ ಸೌಹಾರ್ದ ಮೆರೆದಿದ್ದಾರೆ.
ಈ ಹಿಂದೆ ಸಂಘ ಪರಿವಾರದ ಕಾರ್ಯಕರ್ತರಾಗಿದ್ದ ನಾರಾಯಣ ಒಂದು ತಿಂಗಳ ಹಿಂದೆ ಅನ್ನ, ಆಹಾರವಿಲ್ಲದ ಅಂಗಡಿಯ ಜಗಳಿಯೊಂದರಲ್ಲಿ ದಯನೀಯ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದನ್ನು ಗಮನಿಸಿದ ವಾರ್ಡ್ ಸದಸ್ಯ ಶರೀಫ್ ಚೀನಾಲ ನೀಡಿದ ಮಾಹಿತಿಯಂತೆ ಇರ್ಫಾನಾ ಸ್ಥಳಕ್ಕೆ ಆಗಮಿಸಿ ಬಳಿಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವೈದ್ಯಕೀಯ ಅಧಿಕಾರಿಗೆ ಮಾಹಿತಿ ನೀಡಿದ್ದರು. ಅವರ ನಿರ್ದೇಶನದಂತೆ ಉಪ್ಪಳ ಶೇಖ್ ಸೈಯದ್ ಫೌಂಡೇಶನ್ ಕಾರ್ಯಕರ್ತರು ನಾರಾಯಣರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು
ಆದರೆ ನಾರಾಯಣ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದರು. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಮೃತದೇಹ ಪಡೆದುಕೊಳ್ಳಲು ಮೃತರ ಕುಟುಂಬಸ್ಥರು ಮುಂದೆ ಬರಲಿಲ್ಲ. ನಾರಾಯಣರಿಗೆ ಇಬ್ಬರು ಪತ್ನಿಯರು, ಮಕ್ಕಳು, ಸಹೋದರಿಯರಿಯರು ಇದ್ದರೂ ಮೃತದೇಹ ಪಡೆಯದ ಅವರು ಅಂತ್ಯ ಸಂಸ್ಕಾರ ನೆರವೇರಿಸಲು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಇಕ್ಬಾಲ್ ರಿಗೆ ಒಪ್ಪಿಗೆ ಪತ್ರ ನೀಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ನಾರಾಯಣರ ಮೃತದೇಹವನ್ನು ತಂದು ಉಪ್ಪಳ ಚೆರುಗೋಳಿಯ ಸಾರ್ವಜನಿಕ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸ್ವತಃ ಇರ್ಫಾನಾ ಇಕ್ಬಾಲ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಸಾಮಾಜಿಕ ಕಾರ್ಯಕರ್ತರಾದ ರಿಯಾಝ್ ಪಿಲಾತ್ತರ, ಮುಹಮ್ಮದ್ ಕೈಕಂಬ ಮೊದಲಾದವರು ಸಹಕರಿಸಿದರು.
ಪತಿ ಇಕ್ಬಾಲ್ ಜೊತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ, ಉಪ್ಪಳದ ಶೇಖ್ ಸೈಯದ್ ವೃದ್ಧ ಮಂದಿರದ ಸ್ಥಾಪಕಿಯಾಗಿದ್ದಾರೆ. ಈ ವೃದ್ಧ ಮಂದಿರವು ಮನೆಯವರಿಂದ ಉಪೇಕ್ಷಿಸಲ್ಪಟ್ಟ 50ರಷ್ಟು ಪೋಷಕರನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದೆ






