ಕೇರಳ ವಿಧಾನಸಭಾ ಚುನಾವಣೆ: ಕಾಸರಗೋಡಿನಲ್ಲಿ ಸಕಲ ಸಿದ್ಧತೆ

ಕಾಸರಗೋಡು: ನಾಳೆ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಕಾಸರಗೋಡು ಜಿಲ್ಲೆ ಸಜ್ಜಾಗಿದ್ದು, ಮತಗಟ್ಟೆಗಳಿಗೆ ಮತಯಂತ್ರ ಹಾಗೂ ಸಾಮಗ್ರಿಗಳ ವಿತರಣೆ ಬೆಳಿಗ್ಗೆಯಿಂದ ನಾಲ್ಕು ಕೇಂದ್ರಗಳಲ್ಲಿ ನಡೆಯುತ್ತಿದೆ. ಚುನಾವಣಾ ಕರ್ತವ್ಯಕ್ಕಾಗಿ 5,480 ಮಂದಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ನಾಳೆ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. ಮತ ಎಣಿಕೆ ಮೇ 4ರಂದು ನಡೆಯಲಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 229, ಕಾಸರಗೋಡು ಕ್ಷೇತ್ರದಲ್ಲಿ 218, ಉದುಮದಲ್ಲಿ 217, ಕಾಞಂಗಾಡಿನಲ್ಲಿ 239, ತ್ರಿಕರಿಪುರದಲ್ಲಿ 218 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ.
ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಿಗೆ ಕಾಸರಗೋಡು ಸರ್ಕಾರಿ ಕಾಲೇಜು, ಉದುಮ ಕ್ಷೇತ್ರಕ್ಕೆ ತಂಬೀಹುಲ್ ಇಸ್ಲಾಂ ಹಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ಮತ್ತು ತ್ರಿಕರಿಪುರ ಕ್ಷೇತ್ರಗಳಿಗೆ ಕಾಞಂಗಾಡ್ ದುರ್ಗಾ ಹಯರ್ ಸೆಕೆಂಡರಿ ಶಾಲೆಯಲ್ಲಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದ್ದು, ಈ ಕೇಂದ್ರಗಳಿಂದ ಚುನಾವಣಾ ಸಾಮಗ್ರಿಗಳ ವಿತರಣೆ ಬೆಳಿಗ್ಗೆಯಿಂದ ನಡೆಯುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 11,00,036 ಮತದಾರರಿದ್ದು, ಈ ಪೈಕಿ 5,57,163 ಮಹಿಳೆಯರು, 5,42,861 ಪುರುಷರು ಹಾಗೂ 12 ತೃತೀಯ ಲಿಂಗಿಗಳು ಒಳಗೊಂಡಿದ್ದಾರೆ.
1,141 ವಿವಿಪ್ಯಾಟ್ ಮತಯಂತ್ರಗಳು ಅಗತ್ಯವಿದ್ದರೂ, 20 ಶೇಕಡಾ ಹೆಚ್ಚುವರಿ ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 238 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮಂಜೇಶ್ವರದಲ್ಲಿ 36 ಹಾಗೂ ಕಾಸರಗೋಡು ಕ್ಷೇತ್ರದಲ್ಲಿ 57 ಅತಿಸೂಕ್ಷ್ಮ ಮತಗಟ್ಟೆಗಳಿವೆ. ಜಿಲ್ಲೆಯ 1,141 ಮತಗಟ್ಟೆಗಳಲ್ಲೂ ವೆಬ್‌ಕಾಸ್ಟಿಂಗ್ ಅಳವಡಿಸಲಾಗಿದೆ. ಎಲ್ಲಾ ಮತಗಟ್ಟೆಗಳಿಗೆ ವೆಬ್‌ಕಾಸ್ಟಿಂಗ್ ಅಳವಡಿಸುವುದು ಇದೇ ಮೊದಲ ಬಾರಿಯಾಗಿದೆ.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದರಂತೆ ಐದು ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸಲಿದ್ದಾರೆ. ಮತದಾರರು ಮತದಾನ ಮಾಡಲು ಫೋಟೋ ಲಗತ್ತಿಸಿದ ವೋಟರ್ ಐಡಿ ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ 4,292 ಮಂದಿ 85ರ ಮೇಲ್ಪಟ್ಟ ವೃದ್ಧರಿದ್ದು, ಅವರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ ಒದಗಿಸಲಾಗಿದೆ.
ಭದ್ರತೆಗಾಗಿ 1,992 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 16 ತುಕಡಿ ಕೇಂದ್ರಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಕಾಸರಗೋಡು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಸಾವಿರಾರು ಪ್ರಕರಣಗಳು ಪತ್ತೆ
ಕಾಸರಗೋಡು: ಜಿಲ್ಲೆಯಲ್ಲಿ 5,171 ಚುನಾವಣಾ ನೀತಿ ಸಂಹಿತೆ ಉಲ್ಲಂಘನಾ ಪ್ರಕರಣಗಳು ಪತ್ತೆಯಾಗಿದ್ದು, ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಮಟ್ಟದ ಆಂಟಿ ಡಿಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ಇವು ಪತ್ತೆಯಾಗಿವೆ.
ಈ ಪೈಕಿ 2,880 ಪೋಸ್ಟರ್ ಅಂಟಿಸುವುದು, 405 ಬ್ಯಾನರ್, 236 ಗೋಡೆ ಬರಹಗಳು ಸೇರಿ ಒಟ್ಟು 5,177 ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಪಾಲನೆಗಾಗಿ ಆರು ಆಂಟಿ ಡಿಫೋರ್ಸ್‌ಮೆಂಟ್ ಸ್ಕ್ವಾಡ್‌ಗಳು ಕಾರ್ಯಾಚರಿಸುತ್ತಿವೆ. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಕೆ.ವಿ. ಶ್ರುತಿ ನೇತೃತ್ವದಲ್ಲಿ ತಂಡಗಳು ಕಾರ್ಯಾಚರಿಸುತ್ತಿವೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಗಳಲ್ಲಿ ಪ್ರಮುಖವಾದ ಎಲ್ಲಾ ಪಕ್ಷಗಳೂ ಒಳಗೊಂಡಿವೆ.







