ಕಾಫಿ, ಏಲಕ್ಕಿ ಗಿಡಗಳನ್ನು ನಾಶ ಮಾಡಿದ ಪ್ರಕರಣ; ಮಡಿಕೇರಿ ಅರಣ್ಯ ಭವನಕ್ಕೆ ಬೆಳೆಗಾರರ ಮುತ್ತಿಗೆ

ಮಡಿಕೇರಿ, ಸೆ.26: ಮುಕ್ಕೋಡ್ಲು ಗ್ರಾಮದಲ್ಲಿ ಬೆಳೆೆಗಾರರೊಬ್ಬರ ಎರಡು ಎಕರೆ ಜಾಗದಲ್ಲಿ ಬೆಳೆದಿದ್ದ ಕಾಫಿ ಮತ್ತು ಏಲಕ್ಕಿ ಗಿಡಗಳನ್ನು ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ವಜಾಗೊಳಿಸಬೇಕು ಮತ್ತು ಸಂತ್ರಸ್ತ ಬೆಳೆಗಾರನಿಗೆ 30 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ ರೈತರು ನಗರದ ಅರಣ್ಯ ಭವನದ ಎದುರು ಧರಣಿ ನಡೆಸಿದರು.
ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಅವರ ನೇತೃತ್ವದಲ್ಲಿ ಸಂತ್ರಸ್ತ ಮುಕ್ಕೋಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ, ಅವರ ಪತ್ನಿ ಹಾಗೂ ಗ್ರಾಮಸ್ಥರು ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಆಗ್ರಹಿಸಿದರು.
ಸಿ ಮತ್ತು ಡಿ ಜಮೀನು, ಸೆಕ್ಷನ್ 4 ಸರ್ವೇ ಮೊದಲಾದ ಕಾರಣಗಳನ್ನು ನೀಡಿ ಅರಣ್ಯ ಇಲಾಖೆ ಬೆಳೆಗಾರರಿಗೆ ಅನಗತ್ಯ ಸಂಕಷ್ಟವನ್ನು ತಂದೊಡ್ಡುತ್ತಿದೆ. ನಾವು ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ, ನಮಗೆ ಬದುಕಲು ಬಿಡಿ. ನಮ್ಮನ್ನು ಒಕ್ಕಲೆಬ್ಬಿಸುವ ಕಾರ್ಯ ನಡೆಸಬಾರದು ಎಂದು ಘೋಷಣೆಗಳೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ಹಾಗೂ ಡಿಸಿಎಫ್‌ಒ ಅಭಿಷೇಕ್ ಅವರನ್ನು ಉದ್ದೇಶಿಸಿ ಮಾತನಾಡಿದ ಸುರೇಶ್ ಚಕ್ರವರ್ತಿ, ತೋಟದ ಗಿಡಗಳನ್ನು ನಾಶ ಮಾಡಿದ ಇಬ್ಬರು ಸಿಬ್ಬಂದಿಯನ್ನು ವಜಾ ಗೊಳಿಸಬೇಕು ಮತ್ತು ನಾಣಿಯಪ್ಪ ಅವರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ತಿಂಗಳ ಗಡುವನ್ನು ನೀಡಲಾಗಿತ್ತು. ಆದರೆ, ಇಲ್ಲಿಯವರೆಗೆ ಸೂಕ್ತ ಸ್ಪಂದನ ಅರಣ್ಯ ಇಲಾಖೆಯಿಂದ ದೊರಕಿಲ್ಲ ಎಂದರು.
ಈ ವೇಳೆ ಮಾತನಾಡಿದ ಡಿಸಿಎಫ್‌ಒ ಅಭಿಷೆೇಕ್, ಮುಕ್ಕೋಡ್ಲುವಿನಲ್ಲಿ ತೆರವುಗೊಳಿಸಿರುವ ಜಾಗ ಅರಣ್ಯ ಇಲಾಖೆಗೆ ಒಳಪಟ್ಟಿರುವುದಾಗಿ 2014ರ ಸರ್ವೇಯಲ್ಲಿ ಇದೆ. ಆ ಜಾಗದಲ್ಲಿ ಹೊಸದಾಗಿ ಕಾಫಿ ಗಿಡಗಳನ್ನು ನೆಡಲಾಗಿತ್ತು. ಈ ಸರ್ವೇ ನಂಬರ್‌ನ ಎಲ್ಲ ಜಾಗ ‘ಡೀಮ್ಡ್ ಫಾರೆಸ್ಟ್’ ಎಂದಿದೆ ಎಂದು ಹೇಳಿದರು.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಧರಣಿನಿರತರು, ಜಾಗ ಒತ್ತುವರಿ ಎನ್ನುವುದಾದರೆ, ಅದನ್ನು ತೆರವುಗೊಳಿಸುವುದಕ್ಕೆ ಬೆಳೆಗಾರನಿಗೆ ನೋಟಿಸ್ ನೀಡಿದ್ದೀರಾ ಎಂದು ಪ್ರಶ್ನಿಸಿದರು.
ಕಾಳಚಂಡ ನಾಣಿಯಪ್ಪ ಅವರು ತೋಟ ಮಾಡಿರುವ ಜಾಗ ಕಂದಾಯ ಇಲಾಖೆಗೆ ಒಳಪಟ್ಟದ್ದೆನ್ನುವುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು ಮತ್ತು ತೋಟದ ಗಿಡಗಳನ್ನು ಕಡಿದ ಇಲಾಖಾ ಸಿಬ್ಬಂದಿಯನ್ನು ವಜಾಗೊಳಿಸುವಂತೆ ಪಟ್ಟು ಹಿಡಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ಮಾತನಾಡಿ, ಮುಕ್ಕೋಡ್ಲುವಿನಲ್ಲಿ ಕಾಫಿ ಮತ್ತು ಏಲಕ್ಕಿ ಗಿಡಗಳನ್ನು ಕಡಿದಿರುವ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಮೇಲೆ ಈ ತಕ್ಷಣದಿಂದ ತನ್ನ ಅಧಿಕಾರದ ಪರಿಮಿತಿಯಲ್ಲಿ ಸ್ವತಂತ್ರ ತನಿಖೆೆಗೆ ಆದೇಶ ಮಾಡುತ್ತಿದ್ದೇನೆ. ಅರಣ್ಯ ಸಿಬ್ಬಂದಿಯಿಂದ ತಪ್ಪಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ವಾರದ ಕಾಲಾವಕಾಶ ಬೇಕೆಂದು ಕೋರಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಮಾತಿಗೆ ಸಹಮತ ವ್ಯಕ್ತಪಡಿಸದ ಬೆಳೆಗಾರರು ಗಿಡಗಳನ್ನು ಕಡಿದ ಇಬ್ಬರನ್ನು ವಜಾಗೊಳಿಸಬೇಕು. ಅವರು ಮಾಡಿರುವುದು ತಪ್ಪು ಎನ್ನುವುದಕ್ಕೆ ನಮ್ಮ ಬಳಿ ಅಗತ್ಯ ಪುರಾವೆಗಳಿವೆ. ತನಿಖೆಯನ್ನು ನೀವು ನಡೆಸಿ. ನಿಮ್ಮ ನಿರ್ಧಾರ ಹೊರ ಬರುವವರೆಗೂ ನಾವು ಅರಣ್ಯ ಭವನದ ಆವರಣದಲ್ಲೇ ಇರುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ, ಸೋಮವಾರಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ಭಾಗಮಂಡಲ ತಣ್ಣಿಮಾನಿ ವ್ಯಾಪ್ತಿಯಲ್ಲಿ ಸಿ ಮತ್ತು ಡಿ ಜಮೀನಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಜಿಪಿಆರ್‌ಎಸ್ ಸರ್ವೇ ನಡೆಸುತ್ತಿರುವುದನ್ನು ನಾವು ವಿರೋಧಿಸುತ್ತೇವೆ. ಕಂದಾಯ ಇಲಾಖೆಯೊಂದಿಗೆ ಸೇರಿ ಜಂಟಿ ಸರ್ವೇಯನ್ನೇ ನಡೆಸಬೇಕೆಂದು ಆಗ್ರಹಿಸುತ್ತೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಎಇಸಿಎಫ್‌ಒ ಅಭಿಷೇಕ್, ಸಿ ಮತ್ತು ಡಿ ಜಮೀನಿನ ಗೊಂದಲಗಳ ನಿವಾರಣೆ ಹಿನ್ನೆಲೆಯಲ್ಲಿ ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿಕೊಂಡು ಸರ್ವೇ ನಡೆಸಲಾಗುತ್ತಿದೆ. ಇದಕ್ಕೆ ಬೆಳೆೆಗಾರರು ಸಹಕಾರ ನೀಡಿದರೆ ಯಾವೆಲ್ಲಾ ಭಾಗಗಳಲ್ಲಿ ಜನರ ವಾಸವಿದೆ, ತೋಟಗಳಿದೆ ಎನ್ನುವ ಮಾಹಿತಿ ಲಭ್ಯವಾಗಿ ಅದು ದಾಖಲೆಗೆ ಸೇರುತ್ತದೆ ಎಂದು ತಿಳಿಸಿದರು.
ಇದಕ್ಕೆ ಒಪ್ಪದ ಬೆಳೆಗಾರರು, ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ರೈತ ಹೋರಾಟ ಸಮಿತಿಯ ಕಾರ್ಯದರ್ಶಿ ದಿವಾಕರ್ ಗೌಡ, ಭಾಗಮಂಡಲ ಹೋಬಳಿ ಅಧ್ಯಕ್ಷ ಹೊಸೂರು ಗಿರೀಶ್, ಸಂಘದ ಜಿಲ್ಲಾ ನಿರ್ದೇಶಕ ನಾಗಂಡ ಭವಿನ್, ಮುಕ್ಕೋಡ್ಲು ಗ್ರಾಮದ ಸಜನ್ ನಂದೀರ, ಬಿ.ಜೆ.ದೀಪಕ್, ಕೂತಿ ದಿನೇಶ್ ಹಾಗೂ ನೂರಾರು ಬೆಳೆಗಾರರು ಪಾಲ್ಗೊಂಡಿದ್ದರು.







