ಪೊನ್ನಂಪೇಟೆಯಲ್ಲಿ ಮುಂದುವರಿದ ವಿದ್ಯಾರ್ಥಿಗಳ ಹೋರಾಟ; ಅರಣ್ಯಶಾಸ್ತ್ರ ಪದವೀಧರರನ್ನೇ ಹುದ್ದೆಗೆ ನೇಮಿಸಲು ಆಗ್ರಹ

ಮಡಿಕೇರಿ, ಅ.17: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯ ಅಧಿಕಾರಿ ಹುದ್ದೆಗೆ ಅರಣ್ಯಶಾಸ್ತ್ರ ಪದವೀಧರರನ್ನೇ ನೇರ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳ ಧರಣಿ ಆರನೇ ದಿನವೂ ಮುಂದುವರಿದಿದೆ.
ಕರ್ನಾಟಕ ಅರಣ್ಯಶಾಸ್ತ್ರ ವಿದ್ಯಾರ್ಥಿಗಳು ಮತ್ತು ಪದವೀಧರ ಸಂಘದ ಅಧ್ಯಕ್ಷ ಅಕ್ಷಯ್ ಕುಮಾರ್ ನೇತೃತ್ವದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಮುಂಭಾಗ ತರಗತಿ ಬಹಿಷ್ಕರಿಸಿ, ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡ ವಿದ್ಯಾರ್ಥಿಗಳು ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
ಮುಷ್ಕರದ ಐದನೇ ದಿನ ನೆಲದ ಮೇಲೆಯೇ ಊಟ ಮಾಡಿ ಅಸಮಾಧಾನ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಶುಕ್ರವಾರ ‘ಅಪ್ಪಿಕೋ ಚಳವಳಿ’ ಯನ್ನು ಆಚರಿಸಿ, ಮರಗಳಿಗೆ ಅಪ್ಪಿಕೊಂಡು ಪರಿಸರ ಸಂರಕ್ಷಣೆ ಮತ್ತು ಅರಣ್ಯ ರಕ್ಷಣೆಯ ಮಹತ್ವವನ್ನು ಸಾರಿದರು. ನಾವು ಅರಣ್ಯ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಮಾತ್ರವಲ್ಲದೆ, ಅರಣ್ಯ ವಿಜ್ಞಾನ ವಿದ್ಯಾರ್ಥಿಗಳಾಗಿ ನಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಕೂಡ ನೆನಪಿಸಿಕೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭ ವಿದ್ಯಾರ್ಥಿ ನಯನ ಮಾತನಾಡಿ, ಪದವೀಧರರನ್ನು ತಮ್ಮ ತಮ್ಮ ಇಲಾಖೆಗಳಲ್ಲಿನ ಹುದ್ದೆಗಳಿಗೆ ನೇಮಿಸುತ್ತಿವೆ. ಆದರೆ ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವೀಧರರನ್ನು ಅರಣ್ಯ ಇಲಾಖೆಯು ತನ್ನ ಹುದ್ದೆಗಳಿಗೆ ಯಾಕೆ ಪರಿಗಣಿಸುತ್ತಿಲ್ಲ ಎಂದು ಪ್ರಶ್ನಿಸಿದರು.
‘ನಾವು ಪರಿಸರವನ್ನು ಅಧ್ಯಯನ ಮಾಡುತ್ತಿದ್ದೇವೆ, ಆದರೆ ನಮ್ಮ ಉದ್ಯೋಗ ಎಲ್ಲಿದೆ ?’, ‘ಅರಣ್ಯ ರಕ್ಷಣೆ-ಜೀವನ ರಕ್ಷಣೆ’ ಎಂಬ ಘೋಷಣೆಗಳನ್ನು ಕೂಗುತ್ತಾ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗಿದೆ. ಆದರೂ ಇಲ್ಲಿಯವರೆಗೆ ಯಾವುದೇ ಸ್ಪಂದನ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.







