ತಲಕಾವೇರಿಯಲ್ಲಿ ಕಾವೇರಿ ಪವಿತ್ರ ತೀರ್ಥೋದ್ಭವ; ಕಾಲ್ನಡಿಗೆಯಲ್ಲಿ ಭಾಗವಹಿಸಿದ ಭಕ್ತರು, ಗಣ್ಯರು

ಮಡಿಕೇರಿ, ಅ.17: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವವಾಯಿತು. ಪ್ರಧಾನ ಅರ್ಚಕ ಗುರುರಾಜ್ ಆಚಾರ್ ತಂಡ ಪೂಜಾ ವಿಧಿವಿಧಾನವನ್ನು ನಡೆಸಿಕೊಟ್ಟರು.
ಸಂಸದ ಯದುವೀರ್ ಒಡೆಯರ್, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಎಸ್ಪಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ.ಚಂದ್ರಶೇಖರ್, ತಕ್ಕ ಮುಖ್ಯಸ್ಥರಾದ ಕೋಡಿ ಯು.ಮೋಟಯ್ಯ ಮಠಾಧೀಶರು ಮತ್ತಿತರ ಗಣ್ಯರು ತೀರ್ಥೋದ್ಭವದ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು.
ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಭಾಗಮಂಡಲ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಕಾಲ್ನಡಿಗೆಯ ಮೂಲಕ ಕಾವೇರಿ ಮಾತೆಯ ಸ್ಮರಣೆಯೊಂದಿಗೆ ತಲಕಾವೇರಿಗೆ ತೆರಳಿದರು.
ಕಾವೇರಿ ತೀರ್ಥೋದ್ಭವದ ಸಂದರ್ಭ ಕಲಾವಿದ ದಂಪತಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ತಮ್ಮ 1 ವರ್ಷದ ಮಗು ತ್ರಿದೇವಿ ಜೊತೆಗೆ ಭಾಗಮಂಡಲದಿಂದ ತಲಕಾವೇರಿಗೆ 8 ಕಿ.ಮೀ. ದೂರ ಕಾಲ್ನಡಿಗೆಯಲ್ಲಿಯೇ ಬಂದರು.
ಸಂಸದ ಯದುವೀರ್ ಮೈಸೂರು ರಾಜವಂಶಸ್ಥರ ಉಡುಗೆಯಲ್ಲಿ ಕಾವೇರಿ ತೀರ್ಥೋದ್ಭವದ ಸಂದರ್ಭದಲ್ಲಿ ಕಂಗೊಳಿಸಿದ್ದರು. ತಲೆಗೆ ಮೈಸೂರು ಪೇಟ ಧರಿಸಿದ್ದ ಯದುವೀರ್ ಭಾಗಮಂಡಲದಿಂದ 8 ಕಿ.ಮೀ. ದೂರದ ತಲಕಾವೇರಿಗೆ ಕಾಲ್ನಡಿಗೆಯ ಮೂಲಕ ಬಂದರು. ಶಾಸಕ ಎ.ಎಸ್.ಪೊನ್ನಣ್ಣ ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ಸಂಸದರ ಜೊತೆ ಕಾಲ್ನಡಿಗೆಯಲ್ಲಿಯೇ ಹೆಜ್ಜೆ ಹಾಕಿದರು.







