ಜಿ.ಪಂ, ತಾ.ಪಂ ಕರಡು ಮೀಸಲಾತಿ ಪಟ್ಟಿಯಲ್ಲಿ ಅನ್ಯಾಯ: ಆರೋಪ
ಕೊಡಗು ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಆಕ್ರೋಶ: ಮಡಿಕೇರಿಯಲ್ಲಿ ಪ್ರತ್ಯೇಕ ಸಭೆ

ಮಡಿಕೇರಿ : ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಕರಡು ಮೀಸಲಾತಿ ಪಟ್ಟಿಯಲ್ಲಿ ಕೊಡಗು ಜಿಲ್ಲೆಯ ಅಲ್ಪಸಂಖ್ಯಾತ ಮುಸ್ಲಿಮರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಮಡಿಕೇರಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿದರು.
ಸಭೆಯಲ್ಲಿ ಮೀಸಲಾತಿ ಕರಡು ಪಟ್ಟಿಯಲ್ಲಿ ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಯಿತು.
ಜಿಲ್ಲೆಯಲ್ಲಿ ಗಣನೀಯ ಸಂಖ್ಯೆಯಲ್ಲಿ ಅಲ್ಪಂಖ್ಯಾತ ಮತದಾರರಿರುವ ಕ್ಷೇತ್ರದಲ್ಲಿ ಮೀಸಲಾತಿ ನಿಗದಿಯಲ್ಲಿ ಪ್ರಾತಿನಿಧ್ಯ ನೀಡದಿರುವುದು ವಿರೋಧಿ ನಡೆ ಎಂದು ಮುಖಂಡರು ಆರೋಪಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ಲಿಖಿತ ಆಕ್ಷೇಪ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸೂಕ್ತ ತಿದ್ದುಪಡಿ ಮಾಡಿ ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಅದಲ್ಲದೆ ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಕನಿಷ್ಠ 5ರಿಂದ 6 ಸ್ಥಾನಗಳನ್ನು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಮೀಸಲಾತಿ ಪಟ್ಟಿಯಲ್ಲಿ ಅವಕಾಶ ಸಿಗದಿದ್ದರೆ, ಚುನಾವಣೆಯಲ್ಲಿ ಅಸಹಕಾರ ತೋರುವ ಅಭಿಪ್ರಾಯ ವ್ಯಕ್ತವಾಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಕೆ.ಯಾಕೂಬ್, ಕೊಡಗಿನಲ್ಲಿ ಜಿಪಂ, ತಾಪಂ ಮೀಸಲಾತಿ ಅಚ್ಚರಿ ಮೂಡಿದೆ. ಕೊಡಗಿನಲ್ಲಿ ಕನಿಷ್ಠ ಐದು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ನಿಲ್ಲುವಂತಹ ವ್ಯವಸ್ಥೆಯನ್ನು ಅಧ್ಯಕ್ಷರು, ಶಾಸಕರು ಮಾಡಿಕೊಡಬೇಕಿತ್ತು. ಅಲ್ಪಸಂಖ್ಯಾತರು ಹೆಚ್ಚು ಇರುವ ಭಾಗದಲ್ಲಿ ಮಾತ್ರ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ನಮಗೆ ಗೆಲ್ಲೋದು ಸಾಧ್ಯ. ಬೇರೆ ಕಡೆ ನಮಗೆ ಗೆಲುವು ಕಷ್ಟಸಾಧ್ಯ. ಬಹುಸಂಖ್ಯಾತರು ಎಲ್ಲಿ ನಿಂತರೂ ಅಲ್ಪಸಂಖ್ಯಾತರು ಮತ ಹಾಕುತ್ತಾರೆ. ಆದರೆ ಬಹುಸಂಖ್ಯಾತರು ನಮಗೆ ವೋಟ್ ಹಾಕುವ ವ್ಯವಸ್ಥೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಪ ಸಂಖ್ಯಾತರು ಹೆಚ್ಚಿರುವ 5 ಕ್ಷೇತ್ರಗಳಲ್ಲಿ ಗೆಲ್ಲುವ ವ್ಯವಸ್ಥೆ ಇದೆ. ಅದಕ್ಕೆ ಅನುವು ಮಾಡಿಕೊಡಬಹುದೆಂಬ ವಿಶ್ವಾಸ ನಮಗಿತ್ತು. ಆದರೆ ಇದೀಗ ನಮ್ಮ ವಿಶ್ವಾಸಕ್ಕೆ ಧಕ್ಕೆಯುಂಟಾಗಿದೆ. ಮುಂದಿನ ದಿನಗಳಲ್ಲಿ ಕೊಡಗಿನ ಎಲ್ಲ ಮುಸ್ಲಿಮರು ಒಂದು ಕಡೆ ಸೇರಿ ತೀರ್ಮಾನಕ್ಕೆ ಬರಬೇಕಾಗುತ್ತೆ. ಇಷ್ಟು ದಿನ ನಾವು ಇವರ ಜೊತೆ ಕೈ ಜೋಡಿಸಿ ವಿಶ್ವಾಸದಿಂದ ಬೆಳೆದು ಬಂದಿದ್ದೇವೆ. ಮೂರು ವರ್ಷದಲ್ಲಿ ನಮಗೆ ಯಾವುದೇ ಒಂದು ಅವಕಾಶವನ್ನೂ ಕೊಟ್ಟಿಲ್ಲ. ರಾಜ್ಯ ಮಟ್ಟದಲ್ಲಿ ಒಂದು ನಿಗಮ ಇರಬಹುದು, ಒಂದು ಎಂಎಲ್‌ಸಿ, ನಿಗಮ ಮಂಡಳಿ ಕೊಡಬೇಕು ಅಂತ ಗೆದ್ದ ತಕ್ಷಣ ನಾವೆಲ್ಲ ನಾಯಕರು ಸೇರಿ ಮನವಿ ಕೊಟ್ಟಿದ್ದೇವೆ. ಆದರೆ ಅದಕ್ಕೆ ಯಾವುದೇ ಸ್ಪಂದನ ವ್ಯಕ್ತವಾಗಿಲ್ಲ. ಮೀಸಲಾತಿ ಪುನರ್ ಪರಿಶೀಲನೆ ಮಾಡದಿದ್ದರೆ ತಟಸ್ಥವಾಗಿ ಇರುವ ತೀರ್ಮಾನ ನಾವು ಖಂಡಿತ ಮಾಡುತ್ತೇವೆ. ಯಾವುದೇ ಚುನಾವಣೆಯಲ್ಲಿ ನಾವು ಕೆಲಸ ಮಾಡಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ ಯಾಕೂಬ್ ಎಚ್ಚರಿಸಿದರು.
ಜಿಪಂ ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ, ನಮ್ಮ ಮುಸ್ಲಿಂ ಸಮುದಾಯ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ.98ರಿಂದ 99 ಮತವನ್ನು ನೀಡಿದೆ. ಈ ಬಾರಿ ಜಿಲ್ಲೆಯಲ್ಲಿ ಎರಡು ಶಾಸಕರನ್ನು ಗೆಲ್ಲಿಸಲು ನಮ್ಮ ಸಮುದಾಯವೇ ಪ್ರಮುಖ ಕಾರಣ. ಅಷ್ಟೊಂದು ಬೆಂಬಲ ನೀಡಿದರೂ ನಮ್ಮನ್ನು ಕಡೆಗಣಿಸಿರುವುದು ಸರಿಯಲ್ಲ. ಆದ್ದರಿಂದ ನಾವು ಈ ಕರಡು ಪಟ್ಟಿಗೆ ಆಕ್ಷೇಪ ಸಲ್ಲಿಸಲು ನಿರ್ಧರಿಸಿದ್ದೇವೆ. ಜಿಲ್ಲಾಧಿಕಾರಿಗೆ ಮತ್ತು ಮೇಲಧಿಕಾರಿಗಳಿಗೆ ಮನವಿ ಮಾಡುತ್ತೇವೆ. ನಮಗೂ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಲತೀಫ್ ಆಗ್ರಹಿಸಿದರು.
ಸಭೆಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ಮಾಜಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್, ಟಿ.ಪಿ.ಹಮೀದ್, ಆದಂ ಸೋಮವಾರಪೇಟೆ, ಹಕೀಂ ನೆಲ್ಲಿಹುದಿಕೇರಿ, ಖಲೀಲ್ ಭಾಷಾ ಮಡಿಕೇರಿ, ರಫೀಕ್ ಖಾನ್, ಇಸಾಕ್ ಖಾನ್, ಖಾಲಿದ್ ಹಾಕತ್ತೂರು, ಹಮೀದ್ ಎಂ.ಎಂ.ಕಬಡಕೇರಿ, ಯೂಸುಫ್ ಅಲಿ, ಅಝೀಝ್ ನಾಪೋಕ್ಲು, ಅಬ್ದುಲ್ ರಜಾಕ್ ಕುಶಾಲನಗರ, ಮುಸ್ತಫಾ ಗರಗಂದೂರು, ಆದಂ ಮತ್ತಿತರರು ಉಪಸ್ಥಿತರಿದ್ದರು.






