ಮಡಿಕೇರಿಯಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ
ಕೊಡಗು ಅರೇಬಿಕಾ, ಮಂಡ್ಯ ಜಂಟಿ ಚಾಂಪಿಯನ್

ಮಡಿಕೇರಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು ಅರೇಬಿಕಾ ಹಾಗೂ ಮಂಡ್ಯ ತಂಡಗಳು ಜಂಟಿ ಚಾಂಪಿಯನ್ ಆಗಿ ಹೊರ ಹೊಮ್ಮಿದವು.
ನಗರದ ಫೀಲ್ಡ್ ಮಾಷರ್ಲ್ ಕೆ.ಎಂ.ಕಾರ್ಯಪ್ಪಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯ ಅಂತಿಮ ಹಂತದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಫೈನಲ್ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಫೈನಲ್ ಪ್ರವೇಶಿಸಿದ್ದ ಮಂಡ್ಯ ಹಾಗೂ ಕೊಡಗು ಅರೇಬಿಕಾ ತಂಡಗಳನ್ನು ಜಂಟಿ ವಿಜೇತರೆಂದು ಆಯೋಜಕರು ಘೋಷಿಸಿದರು. ಆದರೆ, ಚಾಂಪಿಯನ್ ಟ್ರೋಫಿಯನ್ನು ಯಾವ ತಂಡಕ್ಕೆ ನೀಡಬೇಕೆಂಬ ಹಿನ್ನೆಲೆಯಲ್ಲಿ ಚರ್ಚೆ ನಡೆಸಿ, ಬಾಲ್ ಔಟ್ ಪ್ರಕ್ರಿಯೆ ಮೂಲಕ ಟ್ರೋಫಿ ವಿಜೇತರನ್ನು ನಿರ್ಧರಿಸಲು ತೀರ್ಮಾನಿಸಲಾಯಿತು.ಫೀಲ್ಡ್ ಸುತ್ತಲೂ ಕಾರುಗಳನ್ನು ನಿಲ್ಲಿಸಿ ಅವುಗಳ ಲೈಟ್‌ನಲ್ಲಿ ಬಾಲ್ ಔಟ್ ಪ್ರಕ್ರಿಯೆ ನಡೆಯಿತು.
ಇದರಂತೆ ಎರಡೂ ತಂಡಗಳಿಗೆ ತಲಾ ಆರು ಎಸೆತಗಳನ್ನು ಎಸೆಯುವ ಅವಕಾಶ ನೀಡಲಾಯಿತು. ಎದುರಾಳಿ ತಂಡದ ವಿಕೆಟ್‌ಗಳನ್ನು ಹೆಚ್ಚು ಬಾರಿ ಉರುಳಿಸುವ ತಂಡಕ್ಕೆ ಚಾಂಪಿಯನ್ ಟ್ರೋಫಿ ನೀಡಲು ನಿರ್ಧರಿಸಲಾಯಿತು. ಈ ರೋಚಕ ಪ್ರಕ್ರಿಯೆಯಲ್ಲಿ ಒಂದು ಬಾಲ್ ಔಟ್ ಮಾಡಿದ ಮಂಡ್ಯ ತಂಡ ಮೇಲುಗೈ ಸಾಧಿಸಿ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ನಿಗದಿಯಾಗಿದ್ದ ಒಟ್ಟು 1.50 ರೂ. ಲಕ್ಷ ನಗದು ಬಹುಮಾನವನ್ನು ಎರಡೂ ತಂಡಗಳಿಗೆ ಸಮನಾಗಿ ಹಂಚಿಕೆ ಮಾಡಿ ವಿತರಿಸಲಾಯಿತು. ಉಳಿದಂತೆ ಬಾಗಲಕೋಟೆ ತೃತೀಯ, ಚಿಕ್ಕಬಳ್ಳಾಪುರ ಚತುರ್ಥ ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಪಂದ್ಯಾವಳಿಯನ್ನು ಕೊಡಗಿನ 2 ತಂಡಗಳು ಸೇರಿದಂತೆ 24 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದ್ದವು.
ಪ್ರಶಸ್ತಿ ವಿಜೇತರು: ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಮಂಡ್ಯ ತಂಡದ ದಿಲೀಪ್, ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ-ಬಾಗಲಕೋಟೆ ತಂಡದ ಮುತ್ತು, ಬೆಸ್ಟ್ ಬ್ಯಾಟ್ಸ್ ಮನ್-ಹಾಸನ ತಂಡದ ಅಭಿಜಿತ್, ಬೆಸ್ಟ್ ಬೌಲರ್- ಬಾಗಲಕೋಟೆಯ ಪರಶುರಾಮ್ ಸನಗಿ, ಬೆಸ್ಟ್ ಕ್ಯಾಚ್ ಪ್ರಶಸ್ತಿ-ಕೊಡಗು ಅರೇಬಿಕಾ ತಂಡದ ಅಖಿಲೇಶ್, ಬೆಸ್ಟ್ ಕೀಪರ್-ಮಂಡ್ಯ ತಂಡದ ನಂದನ್ ರಾಮಕೃಷ್ಣ, ಬೆಸ್ಟ್ ಫೀಲ್ಡರ್-ಕೊಡಗು ಅರೇಬಿಕಾ ತಂಡದ ಇಸ್ಮಾಯಿಲ್ ಕಂಡಕರೆ ಹಾಗೂ ಉತ್ತಮ ತಂಡ ಪ್ರಶಸ್ತಿಯನ್ನು ಚಿಕ್ಕಮಗಳೂರು ತಂಡ ಪಡೆದುಕೊಂಡಿತು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ರಿಪಬ್ಲಿಕ್ ನೆಟ್ ವರ್ಕ್ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ, ಹಿಂದಿನ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಶಶಿಧರ್, ಹಿರಿಯ ಪತ್ರಕರ್ತ ಉಳ್ಳಿಯಡ ಪೂವಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ರಾಜ್ಯ ಸಮಿತಿ ಸದಸ್ಯೆ ಬಿ.ಆರ್.ಸವಿತಾ ರೈ, ರಾಷ್ಟ್ರೀಯ ಸಮಿತಿ ಸದಸ್ಯ ಪಾರ್ಥ ಚಿಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಜೆ.ರಾಕೇಶ್, ತಾಲೂಕು ಅಧ್ಯಕ್ಷರಾದ ರೆಜಿತ್ ಕುಮಾರ್, ಎಂ.ಎನ್.ಚಂದ್ರಮೋಹನ್, ವಿಶ್ವ ಕುಮಾರ್, ಸಂತೋಷ್ ರೈ, ಕಿಶೋರ್ ರೈ, ಉದ್ಯಮಿಗಳಾದ ಅವರೆಮಾದಂಡ ಶರಣ್ ಪೂಣಚ್ಚ, ಎಡಿಕೇರಿ ಪ್ರಸನ್ನ, ಮೈದಾನ ಸಮಿತಿ ಸಂಚಾಲಕ ಮಂಜು ಸುವರ್ಣ, ಆಹಾರ ಸಮಿತಿ ಸಂಚಾಲಕ ಅರುಣ್ ಕುಮಾರ್ ಸೇರಿದಂತೆ ರಾಜ್ಯ ಸಂಘದ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.






