ಸೌಜನ್ಯಾ ಪ್ರಕರಣ | ನೈಜ ಆರೋಪಿಗಳ ಬಂಧನಕ್ಕೆ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಒತ್ತಾಯ

ಮಡಿಕೇರಿ, ಅ.9: ಧರ್ಮಸ್ಥಳದಲ್ಲಿ ನಡೆದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಕೊಡಗು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದೆ.
ಸೌಜನ್ಯ ಪ್ರಕರಣ ನಡೆದು 13 ವರ್ಷಗಳಾಗಿದ್ದರೂ ನೈಜ ಆರೋಪಿಗಳನ್ನು ಬಂಧಿಸಲು ಆಡಳಿತ ವ್ಯವಸ್ಥೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ವೇದಿಕೆ ರಾಜ್ಯವ್ಯಾಪಿ 'ನ್ಯಾಯಕ್ಕಾಗಿ ಜನಾಗ್ರಹ' ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಅಂಗವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಮನವಿ ಸಲ್ಲಿಸಿರುವುದಾಗಿ ವೇದಿಕೆಯ ಪ್ರಮುಖರು ಹಾಗೂ ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್ .ಭರತ್ ತಿಳಿಸಿದ್ದಾರೆ.
ಸೌಜನ್ಯ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸದ ಹಾಗೂ ಸೂಕ್ತ ತನಿಖೆ ನಡೆಸದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆದೇಶವನ್ನು ಸರಕಾರ ಪಾಲಿಸಬೇಕು. ವೈದ್ಯಕೀಯ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧಕ್ರಮ ತೆಗೆದುಕೊಳ್ಳಬೇಕು. ನೈಜ ಆರೋಪಿಗಳ ಬಂಧನಕ್ಕೆ ಸರಕಾರ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನಡೆದ ಅಸಹಜ ಸಾವು, ಕೊಲೆ, ನಾಪತ್ತೆ ಪ್ರಕರಣಗಳ ಜೊತೆಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ಎಸ್ ಐಟಿಗೆ ಒಪ್ಪಿಸಬೇಕು. ಎಸ್‌ಐಟಿ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಪಿತೂರಿಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಸೌಜನ್ಯ ಪ್ರಕರಣದ ಹೋರಾಟಗಾರರ ಮೇಲೆ ಯಾವುದೇ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಸರಕಾರ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯಂತೆ ವೇತನ ನೀಡಲಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಬೇಕು. ಮುಂಡ್ರುಪಾಡಿಯ ದಲಿತ ಕುಟುಂಬಗಳಿಗೆ ತಲಾ ಒಂದು ಏಕರೆ ಸರಕಾರಿ ಭೂಮಿ ನೀಡಬೇಕು. ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿರುವ ಭೂಕಬಳಿಕೆ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಲಾಭದಾಯಕ ಶಿಕ್ಷಣ ಸಂಸ್ಥೆಗಳಿಗೆ ಮೀಸಲಿಟ್ಟಿರುವ ಜಮೀನನ್ನು ದಲಿತ ಸಮುದಾಯಕ್ಕೆ ನೀಡಬೇಕು. ಅರ್ಹ ಭೂರಹಿತ ಫಲಾನುಭವಿಗಳಿಗೆ ಭೂಮಿಯನ್ನು ಹಂಚಬೇಕು ಹಾಗೂ ಮೈಕ್ರೋಫೈನಾನ್ಸ್ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಪಿ.ಆರ್.ಭರತ್ ಭರತ್ ಮತ್ತಷ್ಟು ಬೇಡಿಕೆಗಳನ್ನು ಮುಂದಿಟ್ಟರು.
ಈ ಸಂದರ್ಭ ರೈತ ಸಂಘದ ಮುಖಂಡರಾದ ನೆರವಂಡ ಉಮೇಶ್, ಹಮೀದ್, ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಪದ್ಮನಿ ಶ್ರೀಧರ್, ಕಟ್ಟಡ ಕಾರ್ಮಿಕ ಸಂಘದ ಎ.ಸಿ.ಸಾಬು, ಕಾರ್ಮಿಕ ಮುಖಂಡ ಸಾಜಿ ರಮೇಶ್, ತೋಟ ಕಾರ್ಮಿಕ ಸಂಘಟನೆಯ ಮುಖಂಡ ಎಚ್.ಬಿ.ರಮೇಶ್, ಆದಿವಾಸಿ ಸಂಘಟನೆಯ ಮುಖಂಡರಾದ ಪ್ರೇಮಾ, ಡಿವೈಎಫ್ ಐ ಮುಖಂಡ ಸಾಧಿಕ್ ಹಾಗೂ ಇತರರು ಇದ್ದರು.







