Kodagu | ಕುತೂಹಲ ಮೂಡಿಸಿರುವ ʼಮಾಸ್ತಿ ವೀರಗಲ್ಲುʼ, ʼಕೂರ್ಮ ಕರಂಡಕʼ!

ಮಡಿಕೇರಿ: ಕೊಡಗಿನ ವಿಶಿಷ್ಟ ಗತ ಇತಿಹಾಸ ಪರಂಪರೆ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಎರಡು ಮಹತ್ವದ ಪ್ರಾಚ್ಯ ವಸ್ತುಗಳು ಯವಕಪಾಡಿ ಮತ್ತು ಹಾರಂಗಿ ಹಿನ್ನೀರು ಪ್ರದೇಶಗಳಲ್ಲಿ ಪತ್ತೆಯಾಗಿ ಕುತೂಹಲ ಮೂಡಿಸಿವೆ.
ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಯವಕಪಾಡಿ ಗ್ರಾಮದ ಶ್ರೀ ಭಗವತಿ ದೇಗುಲದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ಗರ್ಭಗುಡಿಯಲ್ಲಿನ ಶ್ರೀ ಭಗವತಿ ದೇವರ ವಿಗ್ರಹವನ್ನು ಹೊರ ತೆಗೆಯುವ ಸಂದರ್ಭ ಅದರ ತಳ ಭಾಗದಲ್ಲಿ ʼಕೂರ್ಮ ಕರಂಡಕʼ ಪತ್ತೆಯಾಗಿದೆ.
ವಾರದ ಹಿಂದಷ್ಟೆ ದೇಗುಲದ ಜೀರ್ಣೋದ್ಧಾರ ಹಂತದಲ್ಲಿ ಕಂಡು ಬಂದ ಕೂರ್ಮ ಕರಂಡಕವನ್ನು ಇದೀಗ ನಗರದ ಪ್ರಾಚ್ಯ ವಸ್ತು ಸಂಗ್ರಹಾಲಯಕ್ಕೆ ಸೇರ್ಪಡೆ ಮಾಡಲಾಗಿದೆಯೆಂದು ಸರಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ.ರೇಖಾ ಅವರು ತಿಳಿಸಿದರು.
ಕೂರ್ಮ ಕರಂಡಕ ವಿಗ್ರಹದಲ್ಲಿ ಒಂದು ಕರಂಡಕದ ಮೇಲೆ ಆಮೆಯ ಸುಂದರ ವಿಗ್ರಹವಿದ್ದು, ಅದರ ಮೇಲ್ಭಾಗ ಲಂಬವಾದ ಆಕೃತಿಯ ರಚನೆ ಇದೆ.
ಈ ವಿಗ್ರಹ ಸುಮಾರು 16 ಇಲ್ಲವೆ 17 ನೇ ಶತಮಾನದ್ದೆಂದು ಊಹಿಸಲಾಗಿದ್ದು, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಆ ದಿನಗಳಲ್ಲಿ ಕೊಡಗನ್ನು ಹಾಲೇರಿ ರಾಜವಂಶ ಆಳುತಿತ್ತೆಂದು ರೇಖಾ ಮಾಹಿತಿ ನೀಡಿದ್ದಾರೆ.
ಮಾಸ್ತಿ ವೀರಗಲ್ಲು
ಪ್ರಸಕ್ತ ಸಾಲಿನ ಬೇಸಿಗೆಯ ಅವಧಿಯ ಉರಿಬಿಸಿಲ ಹೊಡೆತಕ್ಕೆ ಹಾರಂಗಿಯ ಹಿನ್ನೀರು ಸಾಕಷ್ಟು ಬೇಗನೆ ತಳಸೇರಿದೆ. ಈ ಸಂದರ್ಭ ಪ್ರಾಚ್ಯ ವಸ್ತು ಇಲಾಖೆಯಿಂದ ನಡೆಸಿದ ಉತ್ಖನನದ ಸಂದರ್ಭ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಸೂಕ್ಷ್ಮ ಕೆತ್ತನೆಗಳನ್ನು ಒಳಗೊಂಡ "ಮಾಸ್ತಿ ವೀರಗಲ್ಲು" ಪತ್ತೆಯಾಗಿದೆ.
ಈ ಮಾಸ್ತಿ ವೀರಗಲ್ಲುವಿನಲ್ಲಿ ಬಿಲ್ಲು ಬಾಣವನ್ನು ಹೂಡಿದ ಯೋಧರು, ಯುದ್ಧದ ಚಿತ್ರಗಳು ಅತ್ಯಂತ ಸೊಗಸಾಗಿ ಮೂಡಿ ಬಂದಿದೆ. ಈ ಮಾಸ್ತಿಗಲ್ಲು ಸುಮಾರು 11 ಇಲ್ಲವೆ 12ನೇ ಶತಮಾನದ ಚೆಂಗಾಳ್ವರ ಕಾಲದ್ದು. ಇಂತಹ ಮಾಸ್ತಿ ವೀರಗಲ್ಲು, ಸತಿ ಗಲ್ಲು ಮೊದಲಾದವುಗಳನ್ನು ಅದು ದೊರಕಿದ ಪ್ರದೇಶಗಳಲ್ಲೆ ವ್ಯವಸ್ಥಿತವಾಗಿ ಅಳವಡಿಸುವ ಕಾರ್ಯಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.
ವಿವಿಧೆಡೆ ಪ್ರಾಚ್ಯ ವಸ್ತುಗಳು
ಕೊಡಗು ಜಿಲ್ಲೆಯ ಐದು ತಾಲ್ಲೂಕು ವ್ಯಾಪ್ತಿಗಳಲ್ಲಿ 701 ದೇವಸ್ಥಾನಗಳಿದ್ದು, 1914ನೇ ಇಸವಿಯಲ್ಲಿ ಬ್ರಿಟಿಷ್ ಪ್ರಾಚ್ಯ ವಸ್ತು ತಜ್ಞರಾದ ಬಿ.ಎಲ್.ರೈಸ್ ಅವರು, ಕೊಡಗಿನ ಗ್ರಾಮಿಣ ಭಾಗಗಳಲ್ಲಿನ 106 ಶಾಸನಗಳನ್ನು ಗುರುತು ಮಾಡಿದ್ದರು. ಇವರು ಗುರುತು ಮಾಡಿದ ಶಾಸನಗಳಲ್ಲಿ ಪ್ರಸ್ತುತ 48 ಶಾಸನಗಳನ್ನಷ್ಟೆ ಪತ್ತೆ ಮಾಡಲು ಸಾಧ್ಯವಾಗಿದೆ. ರೈಸ್ ಅವರು ಗುರುತು ಮಾಡದ 78 ಇತರೆ ಶಾಸನ, ಪ್ರಾಚ್ಯ ವಸ್ತುಗಳನ್ನು ಪ್ರಾಚ್ಯ ವಸ್ತು ಇಲಾಖೆ ಗುರುತಿಸುವ ಮೂಲಕ ಕೊಡಗಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಾರ್ಯ ಮಾಡಿದೆ.
ಕೊಡಗಿನ ವಿಶಿಷ್ಟ "ಕೋಲೆಕಲ್ಲು"-ಜಿಲ್ಲಾ ವ್ಯಾಪ್ತಿಯ ವಿವಿಧೆಡೆಗಳಲ್ಲಿ 200 ವೀರಗಲ್ಲು, 77 ಸತಿಕಲ್ಲು, 284 ಕೋಲೆಕಲ್ಲುಗಳನ್ನು ಮತ್ತು 27 ಇತರೆ ಶಿಲ್ಪಗಳನ್ನು ಪತ್ತೆ ಮಾಡಿ ಸಂರಕ್ಷಿಸುವ ಕಾರ್ಯ ನಡೆದಿದೆ. ಇವುಗಳಲ್ಲಿ "ಕೋಲೆಕಲ್ಲು" ಕೊಡಗಿಗಷ್ಟೆ ಸೀಮಿತವಾದ ವಿಶಿಷ್ಟವಾದ ಪ್ರಾಚ್ಯ ವಸ್ತು. ಈ ಕಲ್ಲು ಕೊಡಗಿನ ಮನೆತನಗಳ ಮುಖ್ಯಸ್ಥರು ನಿಧನರಾದ ಸಂದರ್ಭ ನೆಟ್ಟ ಕಲ್ಲುಗಳಾಗಿದೆ.






