ಸಂಸ್ಕೃತಿ ಸಂರಕ್ಷಣೆಯಲ್ಲಿ ಕೊಡವರು ಮಾದರಿ: ಬಸವರಾಜ ಬೊಮ್ಮಾಯಿ

ಮಡಿಕೇರಿ : ಪ್ರಾಮಾಣಿಕ ರೀತಿಯಲ್ಲಿ ತಮ್ಮ ಶ್ರೀಮಂತ ಮತ್ತು ವಿಶಿಷ್ಟವಾದ ಮೂಲ ಸಂಸ್ಕೃತಿಯನ್ನು ಸಂರಕ್ಷಿಸಿಕೊಂಡು ಹೋಗುವ ಮೂಲಕ ಕೊಡವ ಸಮುದಾಯವರು ಮಾದರಿಯಾಗಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಶ್ಲಾಘಿಸಿದ್ದಾರೆ.
ಮಾದಾಪುರ ಕೊಡವ ಸಮಾಜದ ನೂತನ ಭವನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಎಲ್ಲರೂ ಆಧುನೀಕತೆಯ ನಾಗಾಲೋಟದಲ್ಲಿ ಸಾಗುತ್ತಿರುವಾಗ ಕೊಡವರು ಮಾತ್ರ ತಮ್ಮ ಹಳೇ ಸಂಸ್ಕೃತಿಯ ಬುನಾದಿಯೊಂದಿಗೆ ಆಧುನೀಕತೆಯನ್ನು ಅಳವಡಿಸಿಕೊಂಡು ಪ್ರಬಲ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ ಜನಾಂಗವಾಗಿದ್ದಾರೆೆ ಎಂದರು.
ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್ ಮಾತನಾಡಿ, ಮಾದಾಪುರ ಕೊಡವ ಸಮಾಜದ ಭವನಕ್ಕೆ ಸಂಸದರ ಅನುದಾನದಲ್ಲಿ 25 ಲಕ್ಷ ರೂ. ನೀಡುವುದಾಗಿ ಘೋಷಿಸಿ, ಇದು ಕೊಡವರಿಗೆ ಸಲ್ಲಬೇಕಾದ ಗೌರವದ ಅನುದಾನ, ಕೊಡವ ಸಂಸ್ಕೃತಿ ಸಂರಕ್ಷಣೆಗೆ ಈ ಭವನ ಸೂಕ್ತ ವೇದಿಕೆಯಾಗಲಿ ಎಂದು ಹಾರೈಸಿದರು.
ತಮ್ಮ ಮೂಲ ಸಂಸ್ಕೃತಿ, ಸಂಪ್ರದಾಯ ಸಂರಕ್ಷಣೆಗೆ ಕೊಡವ ಸಮುದಾಯ ಆದ್ಯತೆ ನೀಡುತ್ತಿರುವುದು ಮಾದರಿಯಾಗಿದೆ. ಮೂಲಸಂಸ್ಕೃತಿ ಸಂರಕ್ಷಣೆ ನಿಟ್ಟಿನಲ್ಲಿ ಕೊಡವರ ಪ್ರಯತ್ನ ಕರ್ನಾಟಕದ ಇತರ ಸಮುದಾಯವರಿಗೂ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ವಿ.ಪರಿಷತ್ ಸದಸ್ಯೆ ಮಂಡೇಪಂಡ ಸುಜಾ ಕುಶಾಲಪ್ಪ,ವಿ.ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಎಸ್‌ಎಲ್‌ಎನ್ ಸಂಸ್ಥೆಯ ಉದ್ಯಮಿ ಸಾತಪ್ಪನ್ ಮಾತನಾಡಿದರು.
ಈ ಸಂದರ್ಭ ವಿ.ಪರಿಷತ್ ಮಾಜಿ ಶಾಸಕ ಮಂಡೇಪಂಡ ಸುನೀಲ್ ಸುಬ್ರಹ್ಮಣಿ, ಉದ್ಯಮಿಗಳಾದ ವಿಶ್ವನಾಥನ್, ನಾಪಂಡ ಮುತ್ತಪ್ಪ, ತೆರಿಗೆ ಇಲಾಖೆಯ ಆಯುಕ್ತ ಜಯರಾಮ್, ಮಚ್ಚಂಡ ಬೋಪಣ್ಣ, ಪಾಸುರ ಎನ್.ಉತ್ತಪ್ಪ, ಅಜ್ಜಿಕುಟ್ಟೀರ ಗಿರೀಶ್, ಸುನೀತಾ, ನಾಗಂಡ ಸಿ. ಕಾಳಪ್ಪ ಉಪಸ್ಥಿತರಿದ್ದರು.






