ಹಾಕಿ ಕ್ಷೇತ್ರದ ಸಾಧನೆಗೆ ಡಾ.ಎ.ಬಿ.ಸುಬ್ಬಯ್ಯ ಅವರಿಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

ಎ.ಬಿ. ಸುಬ್ಬಯ್ಯ
ಮಡಿಕೇರಿ : ಕೊಡಗಿನ ಕ್ರೀಡಾ ಕ್ಷೇತ್ರದ ಸಾಧಕರಲ್ಲಿ ಒಬ್ಬರಾದ ಅಂತಾರಾಷ್ಟ್ರೀಯ ಹಾಕಿ ಆಟಗಾರ, ಒಲಿಂಪಿಯನ್ ಡಾ. ಎ.ಬಿ. ಸುಬ್ಬಯ್ಯ ಅವರು ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಡಿಕೇರಿಯಲ್ಲಿ ಜನಿಸಿದ ಅಂಜಪರ್ವಂಡ ಬೋಪಯ್ಯ ಸುಬ್ಬಯ್ಯ ಅವರು ಬಾಲ್ಯದಿಂದಲೇ ಹಾಕಿ ಕ್ರೀಡೆಯತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಹಾಕಿ ಆಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಬಳಿಕ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆದು ಕ್ರೀಡಾ ಬದುಕಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಟ್ಟರು.
1988ರಿಂದ 1998ರವರೆಗೆ ಭಾರತೀಯ ಹಾಕಿ ತಂಡವನ್ನು ಪ್ರತಿನಿಧಿಸಿದ ಅವರು ಸುಮಾರು 285ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. 1992ರ ಬಾರ್ಸಿಲೋನಾ ಒಲಿಂಪಿಕ್ಸ್ ಹಾಗೂ 1996ರ ಅಟ್ಲಾಂಟಾ ಒಲಿಂಪಿಕ್ಸ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. 1994ರ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿಯೂ ಭಾರತ ತಂಡದ ಪರ ಆಡಿದ್ದಾರೆ.
1990ರ ಬೀಜಿಂಗ್ ಏಷ್ಯನ್ ಕ್ರೀಡಾಕೂಟ ಹಾಗೂ 1994ರ ಹಿರೋಷಿಮಾ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದ ಅವರು, 1998ರ ಬ್ಯಾಂಕಾಕ್ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ತಂಡದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಕ್ರೀಡಾ ಕ್ಷೇತ್ರದಲ್ಲಿನ ಅಮೋಘ ಸಾಧನೆಗಾಗಿ 1997ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ, 2003ರಲ್ಲಿ ಏಕಲವ್ಯ ಪ್ರಶಸ್ತಿ ಹಾಗೂ 2010ರಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಜೀವಮಾನ ಸಾಧನೆ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯವು ಕ್ರೀಡೆ ಮತ್ತು ಸಾಮಾಜಿಕ ಸೇವೆಗೆ ಸಲ್ಲಿಸಿದ ಕೊಡುಗೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿಯನ್ನೂ ನೀಡಿ ಗೌರವಿಸಿದೆ.
ಆಟಗಾರನಾಗಿ ಮಾತ್ರವಲ್ಲದೆ ಹಾಕಿ ಕ್ರೀಡೆಯ ಬೆಳವಣಿಗೆಗೆ ತರಬೇತುದಾರ, ಆಯ್ಕೆಗಾರ, ಆಡಳಿತಗಾರ ಹಾಗೂ ಅಂಪೈರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಹಾಕಿ ಕ್ಷೇತ್ರದಲ್ಲಿ ಹಲವು ದಶಕಗಳ ಅನುಭವ ಹೊಂದಿರುವ ಅವರು ಯುವ ಕ್ರೀಡಾಪಟುಗಳಿಗೆ ಮಾರ್ಗದರ್ಶಕರಾಗಿದ್ದಾರೆ.






