ಗ್ರಾಮ ಪಂಚಾಯಿತಿ ಸದಸ್ಯರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಗ್ರಾಮದ ಅಭಿವೃದ್ಧಿ ಸಾಧ್ಯ : ಡಾ.ಮಂತರ್ ಗೌಡ
"ಎರಡು ದಶಕಗಳ ಬಳಿಕ ಪಾಲೆಮಾಡು ನಿವಾಸಿಗಳಿಗೆ ಹಕ್ಕು ಪತ್ರ"

ಮಡಿಕೇರಿ : ಚುನಾವಣಾ ಸಂದರ್ಭದಲ್ಲಿ ರಾಜಕೀಯ ಮಾಡೋಣ, ಇನ್ನುಳಿದ ಅವಧಿಯಲ್ಲಿ ನಾವೆಲ್ಲರೂ ಸೇರಿ ಪಕ್ಷಾತೀತವಾಗಿ, ಜಾತ್ಯತೀತವಾಗಿ, ಅಭಿವೃದ್ಧಿಗಾಗಿ ಶ್ರಮಿಸೋಣ.ಪ್ರ ತಿಯೊಂದು ಗ್ರಾಮ ಅಭಿವೃದ್ಧಿಯಾರೆ, ಇಡೀ ಜಿಲ್ಲೆ ಅಭಿವೃದ್ಧಿಯಾಗಲಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಅಭಿಪ್ರಾಯಪಟ್ಟರು.
ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು,ಅಭಿವೃದ್ಧಿ ವಿಷಯದಲ್ಲಿ ನಾನು ಯಾರೊಂದಿಗೂ ಕೂಡ ರಾಜಕೀಯ ಮಾಡಲು ಹೋಗುವುದಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಗ್ರಾಮದ ಅಭಿವೃದ್ಧಿ ಸಾಧ್ಯ. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ಹೊದ್ದೂರು ಗ್ರಾಮ ಪಂಚಾಯಿತಿ ಮಾದರಿ ಗ್ರಾಮ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಚುನಾವಣಾ ಪೂರ್ವದಲ್ಲಿ ಪಾಲೆಮಾಡು ನಿವಾಸಿಗಳಿಗೆ ನೀಡಿದ್ದ ಭರವಸೆಯಂತೆ ಇದೀಗ 201 ಕುಟುಂಬಗಳಿಗೆ ಹಕ್ಕು ಪತ್ರವನ್ನು ನೀಡಿದ್ದೇವೆ ಎಂದರು.
ಕಳೆದ ಎರಡು ದಶಕಗಳಿಂದ ಪಾಲೆಮಾಡು ನಿವಾಸಿಗಳಿಗೆ ಸಿಗದ ಹಕ್ಕು ಪತ್ರವನ್ನು ನಾನು ಶಾಸಕನಾದ ನಂತರ ತಕ್ಷಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಡಿಕೊಟ್ಟಿದ್ದೇನೆ. ಹಕ್ಕು ಪತ್ರವನ್ನು ಸ್ವೀಕರಿಸಿದವರು ಯಾವುದೇ ಕಾರಣಕ್ಕೂ ಅದನ್ನು ಮಾರಾಟ ಮಾಡಲು ನಿಲ್ಲಬಾರದು. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರವೂ ನಮ್ಮೊಂದಿಗೆ ಇರಬೇಕೆಂದು ಇದೇ ಸಂದರ್ಭ ಶಾಸಕರಾದ ಮಂತರ್ ಗೌಡ ಅವರು ಹೇಳಿದರು.
ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ ಹಂಸ, ಹೊದ್ದೂರು ಗ್ರಾಮ ಪಂಚಾಯಿತಿ ಇಡೀ ಜಿಲ್ಲೆಯಲ್ಲಿ ಮಾದರಿ ಗ್ರಾಮ ಪಂಚಾಯಿತಿಯಾಗಿ ಕಾರ್ಯನಿರ್ವಹಿಸಲು ಶಾಸಕರಾದ ಡಾ ಮಂತರ್ ಗೌಡ ಅವರ ಸಹಕಾರ ಮತ್ತು ಮಾರ್ಗದರ್ಶನ ದೊಡ್ಡ ಮಟ್ಟದಲ್ಲಿ ಇದೆ. ಶಾಸಕರಾದ ನಂತರ ಡಾ ಮಂತರ್ ಗೌಡ ಅವರು ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕಳೆದ ಒಂದುವರೆ ವರ್ಷದಲ್ಲಿ 29ಕ್ಕೂ ಹೆಚ್ಚು ಬಾರಿ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಅದಲ್ಲದೇ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 3.60 ಕೋಟಿ ಅನುದಾನವನ್ನು ನೀಡಿದ್ದಾರೆ ಎಂದು ಹೇಳಿದರು.
ಕಳೆದ 20 ವರ್ಷಗಳಿಂದ ಪಾಲೆಮಾಡು ನಿವಾಸಿಗಳು ಹಕ್ಕುಪತ್ರಕ್ಕಾಗಿ ಹೋರಾಟ ಮಾಡುತ್ತಿದ್ದರು. ಆದರೆ ಡಾ ಮಂತರ್ ಗೌಡ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪಾಲೆಮಾಡು ಗ್ರಾಮಕ್ಕೆ ಭೇಟಿ ಚುನಾವಣಾ ಬಹಿಷ್ಕಾರ ಕೈ ಬಿಡುವಂತೆ ಮನವಿ ಮಾಡಿ, ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಇದೀಗ ನುಡಿದಂತೆ ಶಾಸಕರು ನಡೆದಿದ್ದಾರೆ. ಎರಡು ದಶಕಗಳ ಕನಸನ್ನು ಡಾ ಮಂತರ್ ಗೌಡ ಅವರು ಶಾಸಕರಾದ ನಂತರ ನನಸು ಮಾಡಿದ್ದಾರೆ ಎಂದು ಹೆಚ್.ಎ ಹಂಸ ಹೇಳಿದರು.
ಅರಣ್ಯಾಧಿಕಾರಿಗೆ ಖಡಕ್ ಸೂಚನೆ ಕೊಟ್ಟ ಮಂತರ್ ಗೌಡ:
ಹೊದ್ದೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಅಹ್ವಾಲು ಸ್ವೀಕರಿಸುವ ಸಂದರ್ಭದಲ್ಲಿ ಕಳೆದ ಒಂದು ವರ್ಷದಿಂದ ಕಬಡಕ್ಕೇರಿ ಗ್ರಾಮದಲ್ಲಿ ಮರ ತೆರವುಗೊಳಿಸಲು ಅರಣ್ಯಾಧಿಕಾರಿಗೆ ಮನವಿ ಕೊಟ್ಟರೂ ಇದುವರೆಗೆ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.
ಗ್ರಾಮ ಸಭೆಗೆ ಗೈರು ಹಾಜರಾಗಿದ್ದ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಡಾ ಮಂತರ್ ಗೌಡ, ಆರ್.ಎಫ್.ಓ ಅವರಿಗೆ ಕರೆ ಮಾಡಿ ಕೂಡಲೇ ಮರವನ್ನು ತೆರವುಗೊಳಿಸಲು ಸೂಚನೆ ಕೊಟ್ಟರು.
ನ್ಯಾಯಯುತವಾದ ಹೋರಾಟಕ್ಕೆ ನನ್ನ ಬೆಂಬಲ ಇದೆ :
ಕುಂಬದಾಳುವಿನಲ್ಲಿ ನಡೆಯುತ್ತಿರುವ ನಿವೇಶ ರಹಿತ ಹೋರಾಟಗಾರಕ್ಕೆ ನನ್ನ ನ್ಯಾಯುತವಾದ ಬೆಂಬಲ ಇದೆ. ಕೊಡಗು ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ನಿವೇಶನ ರಹಿತರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕುಂಬಳದಾಳು ಗ್ರಾಮಸ್ಥರಿಗೆ ಸಮಸ್ಯೆಗೆ ನ್ಯಾಯುತವಾದ ಪರಿಹಾರ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸನ್ಮಾನ:
ಪಾಲೆಮಾಡು ನಿವಾಸಿಗಳ ಎರಡು ದಶಕಗಳ ಹೋರಾಟಕ್ಕೆ ಸ್ಪಂದಿಸಿ ಹಕ್ಕುಪತ್ರವನ್ನು ಒದಗಿಸಕೊಟ್ಟ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ ಹಂಸ ಕೊಟ್ಟಮುಡಿ, ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಪ್ರವೀಣ್, ಅಭಿವೃದ್ಧಿ ಅಬ್ದುಲ್ಲಾ ಅವರನ್ನು ಪಾಲೆಮಾಡು ನಿವಾಸಿಗಳು ಸನ್ಮಾನಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಗ್ರಾಮ ಉಪಾಧ್ಯಕ್ಷರಾದ ಅನುರಾಧ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಕೆ ಮೊಣ್ಣಪ್ಪ, ಹೊದ್ದೂರು ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಎಂ ಬಿ ಹಮೀದ್ ಗ್ರಾಮ ಪಂಚಾಯಿತಿ ಸದಸ್ಯರಾದ ಚೌರೀರ ನಾಣಯ್ಯ(ನವೀನ್), ಕುಸುಮಾವತಿ ,ಲಕ್ಷ್ಮಿ, ಟೈನಿ ಕಡ್ಲೆರ, ಚೌರೀರ ಅನಿತಾ, ತಹಶೀಲ್ದಾರ್ ಪ್ರವೀಣ್, ಕಾರ್ಯನಿರ್ವಹಣಾಧಿಕಾರಿ ಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರರು ರಘು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಸಿ ಡಿ ಪಿ ಓ, ಕ್ಷೇತ್ರ ಶಿಕ್ಷಣಾಧಿಕಾರಿ, ಸೆಸ್ಕ್ ಅಭಿಯಂತರರು, ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.