ಕೊಡಗು | ನಕಲಿ ಸಹಿ ಬಳಸಿ ಗ್ರಾಹಕರ ಖಾತೆಯಿಂದ ಹಣ ಡ್ರಾ ; ಬ್ಯಾಂಕ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ಸಿದ್ದಾಪುರ (ಕೊಡಗು): ನಕಲಿ ಸಹಿ ಮೂಲಕ ಬ್ಯಾಂಕ್ ಸಿಬ್ಬಂದಿಯೋರ್ವ ಗ್ರಾಹಕರೊಬ್ಬರ ಖಾತೆಯಿಂದ ಲಕ್ಷಾಂತರ ಹಣವನ್ನು ಡ್ರಾ ಮಾಡಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಹ್ಯ ಗ್ರಾಮದ ನಿವಾಸಿ ಎಂ.ವಿ ನಳಿನಿ ಎಂಬವರು ಸಿದ್ದಾಪುರದ ಕೊಡಗು ಡಿಸಿಸಿ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ನಳಿನಿ ಅವರ ಅರಿವಿಗೆ ಬಾರದೆ ಖಾತೆಯಲ್ಲಿದ್ದ ಸುಮಾರು 1.80 ಲಕ್ಷ ರೂ. ಡ್ರಾ ಮಾಡಲಾಗಿದೆ. ನಳಿನಿ ಅವರ ಖಾತೆಯಲ್ಲಿ ಒಟ್ಟು 1.89 ಲಕ್ಷ ಹಣವಿತ್ತು. ವೃದ್ಧರಾಗಿರುವ ನಳಿನಿ ತಮ್ಮ ಚಿಕಿತ್ಸೆಗೆಂದು ಹಣ ಪಡೆಯಲು ಬ್ಯಾಂಕಿಗೆ ತೆರಳಿದ ಸಂದರ್ಭ ಖಾತೆಯಿಂದ ಚೆಕ್ ಮೂಲಕ ನಕಲು ಸಹಿ ಮಾಡಿ ಮೂರು ಬಾರಿಯಾಗಿ ಒಟ್ಟು 1.80 ಲಕ್ಷ ರೂ. ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ನಳಿನಿ ಅವರು ಬ್ಯಾಂಕ್ ವ್ಯವಸ್ಥಾಪಕರಿಗೆ ದೂರು ಸಲ್ಲಿಸಿದ್ದು, ಸಿಸಿ ಟಿ.ವಿ. ಪರಿಶೀಲಿಸಿದ ಸಂದರ್ಭ ಬ್ಯಾಂಕ್ ಉದ್ಯೋಗಿಯಾಗಿರುವ ಎಸ್.ಪಿ. ರಕ್ಷಿತ್ ಎಂಬಾತ ಹಣ ಡ್ರಾ ಮಾಡಿರುವುದು ತಿಳಿದು ಬಂದಿದೆ. ಬ್ಯಾಂಕ್ ವ್ಯವಸ್ಥಾಪಕರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಹಿಂದೆಯೂ ಹಣ ದುರುಪಯೋಗ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಿತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಚೆಕ್ ಪಡೆದು ನಕಲು ಸಹಿ: ನಳಿನಿ ಅವರು ದಿನನಿತ್ಯ ಬ್ಯಾಂಕ್ ವ್ಯವಹಾರ ಮಾಡುತ್ತಿರಲಿಲ್ಲ. ಹಣ ಸಿಗುವ ಸಂದರ್ಭ ಬ್ಯಾಂಕಿಗೆ ತೆರಳಿ ಹಣವನ್ನು ಖಾತೆಗೆ ಜಮೆ ಮಾಡುತ್ತಿದ್ದರು. ಬ್ಯಾಂಕಿನಿಂದ ಚೆಕ್ ಪುಸ್ತಕವನ್ನು ಪಡೆದಿರಲಿಲ್ಲ. ಚೆಕ್ಗಾಗಿ ಅರ್ಜಿಯನ್ನೂ ಸಲ್ಲಿಸಿರಲಿಲ್ಲ. ಆದರೆ, ಚೆಕ್ ಪುಸ್ತಕ ಪಡೆದು ಹಣವನ್ನು ಡ್ರಾ ಮಾಡಲಾಗಿದೆ. ಬ್ಯಾಂಕ್ ಖಾತೆಯಲ್ಲಿ ಲಿಂಕ್ ಮಾಡಲಾಗಿದ್ದ ಮೊಬೈಲ್ ಸಂಖ್ಯೆಯನ್ನೂ ಬದಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕುಟ್ಟ ಶಾಖೆಯಲ್ಲೂ ಪ್ರಕರಣ: ಕೊಡಗು ಜಿಲ್ಲಾ ಸಹಕಾರ ಕೇಂದ್ರ ನಿಯಮಿತದ ಕುಟ್ಟ ಶಾಖೆಯಲ್ಲೂ ರಕ್ಷಿತ್ ಸುಮಾರು 17 ಲಕ್ಷ ರೂ. ಡ್ರಾ ಮಾಡಿರುವ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಕ್ಷಿತ್ 2019ರಿಂದ 2023ರವರೆಗೆ ಕುಟ್ಟ ಶಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದನು. ಈ ವೇಳೆ ಗ್ರಾಹಕ ಆರ್.ಮುರುಗ ಎಂಬವರ ಠೇವಣಿಯಲ್ಲಿ ಇಟ್ಟಿದ್ದ ಮೊತ್ತದಲ್ಲಿ 17.10 ಲಕ್ಷ ರೂ. ಹಣವನ್ನು ವ್ಯವಸ್ಥಾಪಕ ಹಾಗೂ ಮುರುಗ ಅವರ ಸಹಿಯನ್ನು ನಕಲು ಮಾಡಿ, ರಕ್ಷಿತ್ ಖಾತೆಗೆ ವರ್ಗಾಯಿಸಲಾಗಿತ್ತು. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕಿ ನೀಲಮ್ಮ ಅವರು 2024ರ ಡಿ.27ರಂದು ಕುಟ್ಟ ಠಾಣೆಗೆ ನೀಡಿದ ದೂರಿನ ಮೇರೆಗೆ ರಕ್ಷಿತ್ ನನ್ನು ಬಂಧಿಸಲಾಗಿತ್ತು.
ಬ್ಯಾಂಕ್ ಸಿಬ್ಬಂದಿ ನಕಲಿ ಸಹಿ ಮಾಡಿ ಗ್ರಾಹಕರೊಬ್ಬರ ಖಾತೆಯಿಂದ ಹಣ ತೆಗೆದಿರುವ ಬಗ್ಗೆ ಬ್ಯಾಂಕ್ ವ್ಯಾವಸ್ಥಾಪಕರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.







