ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ : ಇಬ್ಬರ ಬಂಧನ

ಮಡಿಕೇರಿ ಏ.22 : ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆಗೆ ಕೊಡಗು ಜಿಲ್ಲೆಯ ಹೋಂಸ್ಟೇಯೊoದರಲ್ಲಿ ಲೈಂಗಿಕ ಕಿರುಕುಳವಾಗಿದೆ ಎನ್ನುವ ಆರೋಪದಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವಾರ ಅಮೆರಿಕಾ ಮೂಲದ ಮಹಿಳೆಯೊಬ್ಬರು ದಕ್ಷಿಣ ಕೊಡಗಿನ ಕುಟ್ಟ ಗ್ರಾಮದ ಹೋಂಸ್ಟೇಯೊoದರಲ್ಲಿ ತಂಗಿದ್ದ ಸಂದರ್ಭ ಲೈಂಗಿಕ ಕಿರುಕುಳ ನಡೆದಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಆರೋಪದಡಿ ಹೋಂಸ್ಟೇಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾರ್ಖಂಡ್ ಮೂಲದ ಓರ್ವ ಸಿಬ್ಬಂದಿ ಹಾಗೂ ಹೋಂಸ್ಟೇ ಮಾಲೀಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲೈಂಗಿಕ ಕಿರುಕುಳ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿಯನ್ನು ಇಲ್ಲಿಯವರೆಗೆ ಹಂಚಿಕೊಂಡಿಲ್ಲ.
ಕೊಡಗಿನ ಹೋಂಸ್ಟೇಯಲ್ಲಿ ತನಗಾದ ಅನ್ಯಾಯದ ಬಗ್ಗೆ ದೆಹಲಿಯಲ್ಲಿರುವ ಅಮೆರಿಕಾ ರಾಯಭಾರ ಕಚೇರಿಗೆ ಮಹಿಳೆ ದೂರು ನೀಡಿದ ನಂತರ ತನಿಖೆ ಚುರುಕುಗೊಂಡಿದೆ ಎಂದು ತಿಳಿದುಬಂದಿದೆ.
ಪ್ರಕರಣವನ್ನು ಪೊಲೀಸ್ ಇಲಾಖೆ ಗೌಪ್ಯವಾಗಿಟ್ಟಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.






