ಕೊಡಗಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ | ಹಲವು ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ: ಜನಜೀವನ ಅಸ್ತವ್ಯಸ್ತ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಜೋರಾಗಿ ಬೀಸುತ್ತಿರುವ ಗಾಳಿ ಭೀತಿ ಸೃಷ್ಟಿಸಿದೆ. ಹಲವು ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ಇದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನದಿತೀರ, ಬೆಟ್ಟಗುಡ್ಡ ಮತ್ತು ತಗ್ಗು ಪ್ರದೇಶಗಳಲ್ಲಿ ಆತಂಕದ ವಾತಾವರವಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಎನ್‍ಡಿಆರ್‌ಎಫ್ ತಂಡ ಸನ್ನದ್ಧವಾಗಿದೆ.
ಭಾರೀ ಗಾಳಿ ಮಳೆಯ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಜೂ.27ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಮಡಿಕೇರಿ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ದಕ್ಷಿಣ ಕೊಡಗಿನಲ್ಲಿ ಕಳೆದ 24 ಗಂಟೆಗಳಲ್ಲಿ 14 ಇಂಚಿಗೂ ಅಧಿಕ ಮಳೆಯಾಗಿದೆ. ನದಿ ತೊರೆಗಳು ತುಂಬಿ ಹರಿಯುತ್ತಿದ್ದು, ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಕೇರಳ- ಕೊಡಗು ಗಡಿ ಭಾಗದ ಕುಟ್ಟ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಶ್ರೀಮಂಗಲ, ಹುದಿಕೇರಿ, ಶಾಂತಳ್ಳಿ, ನಾಪೋಕ್ಲು ಸೇರಿದಂತೆ ಹಲವು ಗ್ರಾಮಗಳಲ್ಲಿ ಅಧಿಕ ಮಳೆಯಾಗುತ್ತಿದ್ದು, ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವೆಡೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮನೆ, ರಸ್ತೆ, ಸೇತುವೆ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಕಾವೇರಿ ಮತ್ತು ದಕ್ಷಿಣ ಕೊಡಗಿನ ಲಕ್ಷ್ಮಣ ತೀರ್ಥ ನದಿಪಾತ್ರದ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕಾವೇರಿ ಕ್ಷೇತ್ರವಾದ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಇಂದು ಮಳೆಯ ತೀವ್ರತೆ ಹೆಚ್ಚಾಗುವುದರೊಂದಿಗೆ ‘ತ್ರಿವೇಣಿ ಸಂಗಮ' ಮುಳುಗಡೆಯಾಗಿದೆ.
ಕಾವೇರಿ ನದಿ ಪಾತ್ರದ ನಾಪೋಕ್ಲು ವಿಭಾಗದಲ್ಲಿ ಕಳೆದೊಂದು ದಿನದ ಅವಧಿಯಲ್ಲಿ 6 ಇಂಚಿಗೂ ಹೆಚ್ಚಿನ ಮಳೆ ಸುರಿದಿದೆ. ನಾಪೋಕ್ಲು ಸಮೀಪದ ಕಕ್ಕಬ್ಬೆಯಲ್ಲಿ ಬುಧವಾರ ರಾತ್ರಿ ಏಕಾಏಕಿ ಸುರಿದ ಭಾರೀ ಮಳೆಯಿಂದ ಪಟ್ಟದ ಮುಖ್ಯ ರಸ್ತೆಗಳು ಜಲಾವೃತಗೊಂಡ ಘಟನೆ ನಡೆದಿದೆ.
ಭಾರೀ ಮಳೆಯಿಂದಾಗಿ ಕಾವೇರಿಯಲ್ಲಿ ಉಂಟಾಗಿರುವ ಪ್ರವಾಹದಿಂದ ನಾಪೊಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆಯಲ್ಲಿ ಪ್ರವಾಹದ ನೀರು ಆವರಿಸಿ ಸಂಪರ್ಕ ಕಡಿತವಾಗಿದೆ. ನಾಪೊಕ್ಲು, ಕೈಕಾಡು, ಪಾರಾಣೆ ಸಂಪರ್ಕಿಸುವ ಮುಖ್ಯ ರಸ್ತೆಯ ಮೇಲೂ ಪ್ರವಾಹದ ನೀರು ಆವರಿಸಿದೆ.
ಕೈಕಾಡು ರಸ್ತೆಯಲ್ಲಿರುವ ಎತ್ತುಕಡವು ಹೊಳೆಯಲ್ಲಿ ಪ್ರವಾಹವೇರ್ಪಟ್ಟಿದ್ದು, ರಸ್ತೆಯಲ್ಲಿ ಪ್ರವಾಹದ ನೀರು ಆವರಿಸಿ ಸಂಚಾರ ಸ್ಥಗಿತ ಗೊಂಡಿದೆ.ನಾಪೊಕ್ಲು-ಬೇತು ಗ್ರಾಮದ ಮೂಲಕ ಬಲಮುರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಕ್ಕಿ ಕಡವು ಎಂಬಲ್ಲಿ ರಸ್ತೆಗೆ ಪ್ರವಾಹದ ನೀರು ಆವರಿಸಿ ಸಂಚಾರ ಸ್ಥಗಿತಗೊಂಡಿದೆ.
ನಾಪೆಪೊಕ್ಲು, ಕೊಟ್ಟಮುಡಿ, ಬೆಟ್ಟಗೇರಿಯನ್ನು ಸಂಪರ್ಕಿಸುವ ರಸ್ತೆ ಸಂಚಾರಕ್ಕೆ ಮುಕ್ತವಾಗಿದ್ದು, ಮಳೆ ಮುಂದುವರೆದರೆ ಕೊಟ್ಟಮುಡಿ ರಸ್ತೆಯಲ್ಲಿ ಪ್ರವಾಹ ಬಂದು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ನಾಪೊಕ್ಲು ಬಳಿಯ ಚೆರಿಯಪರಂಬು ರಸ್ತೆಯಲ್ಲೂ ಪ್ರವಾಹ ಬಂದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಕಾಳಜಿ ಕೇಂದ್ರ :
ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕರೆ ರಸ್ತೆ ಕಾವೇರಿ ನದಿ ಪ್ರವಾಹದಿಂದ ಆವರಿಸಲ್ಪಟ್ಟಿದ್ದು, ಸಂಪರ್ಕ ಕಡಿತಗೊಂಡಿದೆ. ಅಂದಾಜು ರಸ್ತೆಯಲ್ಲಿ 4 ಅಡಿ ನೀರು ನಿಂತಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ನೆಲೆಸಿರುವ ಕುಟುಂಬಗಳಿಗೆ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಕಂದಾಯ ಅಧಿಕಾರಿಗಳು ಸೂಚನೆಗಳನ್ನು ನೀಡಿದ್ದಾರೆ.
ಎಮ್ಮೆಮಾಡು ಗ್ರಾಮದ ಕದೀಸಮ್ಮ ಎಂಬವರ ವಾಸದ ಮನೆಯ ಅಡುಗೆ ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದಿದ್ದು, ಮನೆಯ ಇತರೆ ಗೋಡೆಗಳಲ್ಲಿ ಬಿರುಕು ಬಿಟ್ಟು ಅಪಾಯ ಎದುರಾಗಿದೆ.
ಕಿರುಂದಾಡು ಗ್ರಾಮದ ದೇವಜನ ಪುಷ್ಪವೇಣಿ ಎಂಬವರ ವಾಸದ ಮನೆಯ ಒಂದು ಭಾಗದ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಅರಪಟ್ಟು ಗ್ರಾಮದ ಜುನೈದ್ ಎಂಬವರ ವಾಸದ ಮನೆಯ ಪಕ್ಕದಲ್ಲೆ ಬರೆ ಜರಿದು ಭಾರೀ ಪ್ರಮಾಣದ ಮಣ್ಣು ಸಂಗ್ರಹವಾಗಿ ಆತಂಕ ಮೂಡಿಸಿದೆ.
ದಕ್ಷಿಣ ಕೊಡಗಿನ ಶೆಟ್ಟಿಗೇರಿ ಮತ್ತು ಹೈಸೊಡ್ಲೂರು ನಡುವೆ ಮರವೊಂದು ಉರುಳಿ ಬಿದ್ದು ಸಂಚಾರಕ್ಕೆ ತೊಡಕುಂಟಾಗಿರುವ ಬಗ್ಗೆ ವರದಿಯಾಗಿದೆ.
ವಿರಾಜಪೇಟೆ ಹೋಬಳಿ ದೇವಣಗೇರಿ ಗ್ರಾಮದ ಹೆಚ್.ಹರೀಶ್ ಎಂಬವರ ವಾಸದ ಮನೆ ಮಳೆಯಿಂದಾಗಿ ಬಾಗಶಃ ಕುಸಿದಿದ್ದು, ಮನೆ ಮಂದಿಯನ್ನು ಪಕ್ಕದ ಮನೆಗೆ ಸ್ಥಳಾಂತರಿಸಿ ಆಹಾರ ಕಿಟ್‍ನ್ನು ವಿತರಿಸಲಾಗಿದೆ.
ಮಳೆ ವಿವರ :
ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 92.55 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 62.63 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1327.46 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 644.95 ಮಿ.ಮೀ ಮಳೆಯಾಗಿತ್ತು.