ಕೊಡಗಿನಲ್ಲಿ ಗಾಳಿ ಸಹಿತ ಭಾರೀ ಮಳೆ | ಮರ ಬಿದ್ದು ಕಾರ್ಮಿಕ ಮಹಿಳೆ ಮೃತ್ಯು : ರೆಡ್ ಅಲರ್ಟ್ ಘೋಷಣೆ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಗಾಳಿ ಸಹಿತ ವ್ಯಾಪಕ ಮಳೆಯಾಗುತ್ತಿದೆ. ಭಾರೀ ಗಾಳಿಗೆ ಮರ ಬಿದ್ದು ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದಲ್ಲಿ ನಡೆದಿದೆ.
ಲೈನ್ ಮನೆಯಲ್ಲಿ ವಾಸವಿದ್ದ ಗೌರಿ (52) ಎಂಬುವವರೇ ಮೃತ ಮಹಿಳೆ . ಮನೆಯಿಂದ ಹೊರ ಬಂದಾಗ ಮರ ಬಿದ್ದಿದ್ದು, ಮರದಡಿ ಸಿಲುಕಿಕೊಂಡ ಗೌರಿ ಮೃತಪಟ್ಟರು, ಮನೆಗೂ ಹಾನಿಯಾಗಿದೆ.
ಭಾರೀ ಮಳೆ :
ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮುಂಗಾರು ಕೇರಳ ಪ್ರವೇಶಿಸುವ ಮೊದಲೇ ಗಡಿ ಜಿಲ್ಲೆ ಕೊಡಗಿನಲ್ಲಿ ಮಳೆಗಾಲದ ವಾತಾವರಣ ಮನೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ದಾಖಲೆಯ 4 ಇಂಚು ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಿಲ್ಲಾ ವ್ಯಾಪಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಗಾಳಿಯಿಂದ ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ನಡೆದಿದೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಕಾವೇರಿ ಹರಿಯುವ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ರಸ್ತೆ, ಚರಂಡಿಗಳ ತುಂಬಾ ಮಳೆ ನೀರು ಹರಿಯುತ್ತಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವಿರಾಜಪೇಟೆಯ ತೋರ ಗ್ರಾಮದಲ್ಲಿ 10 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮುಗುಟಗೇರಿ ಗ್ರಾಮದ ಮುಖ್ಯ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದು, ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಗಾಳಿ, ಮಳೆಯಿಂದ ಜಿಲ್ಲೆಯ ಗುಡ್ಡಗಾಡು ಮತ್ತು ತಗ್ಗು ಪ್ರದೇಶದ ನಿವಾಸಿಗಳಲ್ಲಿ ಆತಂಕ ಮೂಡಿದ್ದು, ಜಿಲ್ಲಾಡಳಿತ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.
ಕಳೆದ 24 ಗಂಟೆಗಳಲ್ಲಿ ಮಡಿಕೇರಿ 44.5 ಮಿ.ಮೀ, ಭಾಗಮಂಡಲ 102 ಮಿ.ಮೀ, ವಿರಾಜಪೇಟೆ 41.6 ಮಿ.ಮೀ, ಪೊನ್ನಂಪೇಟೆ 28 ಮಿ.ಮೀ, ಸೋಮವಾರಪೇಟೆ 20 ಮಿ.ಮೀ ಮಳೆಯಾಗಿದೆ.
ಪ್ರವಾಸಿಗರಿಗೆ ಮಳೆ ಖುಷಿ :
ಪ್ರಖ್ಯಾತ ಪ್ರವಾಸಿತಾಣಗಳಲ್ಲಿ ಜಡಿ ಮಳೆಯ ನಡುವೆ ಸಿಲುಕಿಕೊಂಡ ಪ್ರವಾಸಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಮಡಿಕೇರಿ ನಗರದ ರಾಜಾಸೀಟು ಉದ್ಯಾನವನದಲ್ಲಿ ಗಾಳಿ, ಮಳೆ, ಮಂಜಿನಲ್ಲೂ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿದ್ದರು. ಛತ್ರಿ, ರೈನ್ ಕೋಟ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡು ಬಂತು.







