‘ಕೊಡವಾಮೆ ಬಾಳೋ’ ಕೊಡವರ ಬೃಹತ್ ಪಾದಯಾತ್ರೆಯ ಸಮಾರೋಪ

ಮಡಿಕೇರಿ: ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಕೊಡವಾಮೆ ಬಾಳೋ’ ಕೊಡವರ ಬೃಹತ್ ಪಾದಯಾತ್ರೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೊಡವರು ಹಾಗೂ ಕೊಡವ ಭಾಷಿಕರ ‘ಮಹಾಸಂಗಮ’ದೊಂದಿಗೆ ಶಾಂತಿಯುತವಾಗಿ ಸಮಾರೋಪಗೊಂಡಿತು.
ದಕ್ಷಿಣ ಕೊಡಗಿನ ಕುಟ್ಟದಿಂದ ಕಳೆದ ರವಿವಾರದಂದು ಆರಂಭಗೊಂಡ ಪಾದಯಾತ್ರೆ ಸತತ ಆರು ದಿನಗಳ ಕಾಲ 84 ಕಿ.ಮೀ. ದೂರವನ್ನು ಕ್ರಮಿಸಿತು. ಶುಕ್ರವಾರ ಮಡಿಕೇರಿಯ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿಯ ಕೊಡವ ಸಮಾಜದ ಮಂದ್‌ನಲ್ಲಿ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಕೊಡವ ಸಮುದಾಯದ ಬಾಂಧವರು ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸುವ ಮೂಲಕ ಪಾದಯಾತ್ರೆಯನ್ನು ಅಂತ್ಯಗೊಳಿಸಿದರು.
ಕೊನೆಯ ದಿನವಾದ ಶುಕ್ರವಾರ ಬೆಳಗ್ಗೆ ‘ಕೊಡವಾಮೆ ಬಾಳೋ’ ಪಾದಯಾತ್ರೆ ಕಗ್ಗೋಡ್ಲುವಿನ ಶ್ರೀ ಭಗವತಿ ದೇವಸ್ಥಾನದ ಬಳಿಯಿಂದ ಬೆಳಗ್ಗೆ 10:30ರ ಸುಮಾರಿಗೆ ಆರಂಭಗೊಂಡಿತು. ಸಾಂಪ್ರದಾಯಿಕ ಉಡುಪಿನೊಂದಿಗೆ ನಾಡಿನಾದ್ಯಂತದಿಂದ ಆಗಮಿಸಿದ್ದರು.
ವಿವಿಧ ವಿಭಾಗಗಳಿಂದ ಆಗಮಿಸಿದ ತಂಡ ಹಳೇ ಖಾಸಗಿ ಬಸ್ ನಿಲ್ದಾಣ ಬಳಿ ಪಾದಯಾತ್ರೆಯೊಂದಿಗೆ ಸೇರ್ಪಡೆಯಾಯಿತು. ಇದೇ ಸಂದರ್ಭ ಕೊಡವ ಸಂಘಟನೆಗಳ ಪ್ರಮುಖರು ನಗರದಲ್ಲಿರುವ ವೀರಸೇನಾನಿಗಳ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಕೊಡಗಿನ ಕೊಡವರ ಮತ್ತು ಕೊಡವ ಭಾಷಿಕರ ಪ್ರಮುಖ ಹಕ್ಕೊತ್ತ್ತಾಯಗಳನ್ನು ಮಂಡಿಸಿ, ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರಿಗೆ ಮನವಿ ಸಲ್ಲಿಸಿದರು. ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ, ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರತ್ಯು, ಕೊಡವ ಭಾಷಿಕರ ಒಕ್ಕೂಟದ ಅಧ್ಯಕ್ಷ ಪಡಿಞಾರಂಡ ಪ್ರಭು ಕುಮಾರ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ಮನವಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಲಾಗುವುದು. ಜಿಲ್ಲಾಡಳಿತದ ಮಿತಿಯಲ್ಲಿ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಮುಖರಾದ ಮಾದೇಟಿರ ಬೆಳ್ಯಪ್ಪ ಹಾಗೂ ಮಧೋಷ್ ಪೂವಯ್ಯ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಕೆ : ಕೊಡವ ಜನಾಂಗ ಹಾಗೂ ಕೊಡವ ಸಂಸ್ಕೃತಿಯ ಸಮಗ್ರ ಅಸ್ತಿತ್ವದ ಮೇಲೆ ನಡೆಯುತ್ತಿರುವ ಜನಾಂಗೀಯ ತಾರತಮ್ಯ, ದಬ್ಬಾಳಿಕೆ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯುವ ಯತ್ನದ ವಿರುದ್ಧ ಪಾದಯಾತ್ರೆ ನಡೆಸಲಾಗಿದೆ ಎಂದು ‘ಕೊಡವಾಮೆ ಬಾಳೋ’ ಕೊಡವರ ಬೃಹತ್ ಪಾದಯಾತ್ರೆಯ ಸಮಾರೋಪದಲ್ಲಿ ಅಖಿಲ ಕೊಡವ ಸಮಾಜ ಜಿಲ್ಲಾಡಳಿತಕ್ಕೆ ನೀಡಿದ ಮನವಿ ಪತ್ರದಲ್ಲಿ ತಿಳಿಸಿದೆ.
ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಕೊಡವರ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದೆ. ದೇಶಕಂಡ ಅಪ್ರತಿಮ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಗಳಿಗೆ ಅಗೌರವ ತೋರಲಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಮಹಾನ್ ಸೇನಾನಿಗಳನ್ನು ಕೊಡವರು ಎಂಬ ಏಕೈಕ ಕಾರಣಕ್ಕೆ ಅವಹೇಳನ ಮಾಡಲಾಗಿದೆ. ಕೊಡವರನ್ನು ದ್ವೇಷಿಸುವ ಉದ್ದೇಶ ಇದರಲ್ಲಿ ಅಡಗಿದೆ. ದುಷ್ಟಕೂಟ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ನಿರಂತರವಾಗಿ ಕೊಡವ ಮಹಿಳೆಯರು, ಮಕ್ಕಳ ಅವಹೇಳನ ಮಾಡಲಾಗುತ್ತಿದೆ.
ಕೊಡವರ ಸಾಂಪ್ರದಾಯಿಕ ಉಡುಪು ಮತ್ತು ಆಭರಣಗಳನ್ನು ವಿಡಂಬನಾತ್ಮಕವಾಗಿ ದುರ್ಬಳಕೆ ಹಾಗೂ ಉದ್ದೇಶಪೂರ್ವಕವಾಗಿ ಕೊಡವರಿಗೆ ಮತ್ತು ಕೊಡವ ಸಂಸ್ಕೃತಿಗೆ ಅವಮಾನ ಮಾಡಲಾಗುತ್ತಿದೆ. ಕೊಡಗಿನ ದೇವಸ್ಥಾನಗಳಲ್ಲಿ ಬೈಲಾ ಅಸ್ತ್ರವನ್ನು ಪ್ರಯೋಗಿಸಿ ಕೊಡವ ಸಂಸ್ಕೃತಿ, ಪರಂಪರೆಯನ್ನು ಸಂಪೂರ್ಣ ನಾಶಮಾಡಲು ಹುನ್ನಾರ ನಡೆಯುತ್ತಿದೆ. ಇದು ಸಂವಿಧಾನ ವಿರೋಧಿ ಕೃತ್ಯಮಾತ್ರವಲ್ಲದೆ, ಮಾನವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅಖಿಲ ಕೊಡವ ಸಮಾಜ ಅಸಮಾಧಾನ ವ್ಯಕ್ತಪಡಿಸಿದೆ.
ಬೇಡಿಕೆಗಳು: ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಜನಾಂಗದ ಸಂವಿಧಾನಬದ್ಧ ಬೇಡಿಕೆಗಳಿಗೆ ಸರಕಾರ ತಕ್ಷಣ ಸ್ಪಂದಿಸಬೇಕು. ಕೊಡವ ಜನಾಂಗದ ಪರಂಪರೆ, ಧಾರ್ಮಿಕ ಆಚರಣೆಗಳು, ಸಾಮಾಜಿಕ ಭದ್ರತೆಗೆ ಪೂರಕವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಕೊಡವ ಸಮುದಾಯದ ಮೇಲೆ ಪ್ರಬಲ ಜನಾಂಗಗಳು ರಾಜಕೀಯ ಪ್ರಭಾವ ಬಳಸಿ ನಡೆಸುತ್ತಿರುವ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು. ಕೊಡವ ಸಂಸ್ಕೃತಿ, ಸಂಪ್ರದಾಯ, ಉಡುಗೆ ತೊಡುಗೆ, ಆಭರಣಗಳು, ಆಚರಣೆಗಳ ವಿಡಂಬನಾತ್ಮಕ ಬಳಕೆ ಮತ್ತು ಕೊಡವರ ಭಾವನೆಗಳಿಗೆ ಧಕ್ಕೆ ತರುವ ಪ್ರಚೋದನಾತ್ಮಕ ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಕಟ್ಟೆಮಾಡುವಿನ ಮಹಾದೇವರ ದೇವಸ್ಥಾನವನ್ನು ಮೃತ್ಯುಂಜಯ ದೇವಸ್ಥಾನವೆಂದು ಸುಳ್ಳುನಾಮಕರಣ ಮಾಡುವ ಮೂಲಕ ದೇವಸ್ಥಾನದ ಪಾವಿತ್ರ್ಯತೆಯನ್ನು ನಾಶಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಜನಾಂಗಗಳ ನಡುವೆ ವಿಷಬೀಜವನ್ನು ಬಿತ್ತಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲಾಗಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದ್ದು, ದೇವಸ್ಥಾನದ ಅರ್ಚಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಕಟ್ಟೆಮಾಡು ವಾರ್ಷಿಕ ಉತ್ಸವದ ಸಂದರ್ಭ, ಕೊಡವರ ಸಾಂಸ್ಕೃತಿಕ ಉಡುಗೆಯನ್ನು ನಿರ್ಬಂಧಿಸಲು ಪ್ರಯತ್ನಿಸಿ, ಕೊಡವರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳದ ಹೊರತು ಕೊಡವ ಸಮುದಾಯ ಯಾವುದೇ ಸಂಧಾನ ಸಭೆ ಅಥವಾ ಯಾವುದೇ ಶಾಂತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಜಿಲ್ಲಾಡಳಿತಕ್ಕೆ ನೀಡಿದ ಮನವಿ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಮನವಿ ಪತ್ರವನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ನೀಡಿದರು. ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಜರಿದ್ದರು.







