ಕೊಡಗಿನಲ್ಲಿ ತಗ್ಗಿದ ಮಳೆ | ಪರಿಹಾರ ಕಾರ್ಯ ಬಿರುಸು : ಮಡಿಕೇರಿಯಲ್ಲಿ ಚಳಿ ಗಾಳಿ ಅಧಿಕ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಧಾರಾಕಾರ ಮಳೆ ಇಂದು ಕೊಂಚ ಬಿಡುವು ನೀಡಿದೆ. ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಅಧಿಕಾರಿಗಳಿಂದ ಪರಿಹಾರ ಕಾರ್ಯ ಬಿರುಸುಗೊಂಡಿದೆ.
ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 26 ಇಂಚು ಮಳೆಯಾಗಿದ್ದು, ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 5.5 ಇಂಚು ಮಳೆ ಸುರಿದಿದೆ. ಇಂದು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದ್ದು, ಮಡಿಕೇರಿಯಲ್ಲಿ ಮೈಕೊರೆಯುವ ಚಳಿ ಗಾಳಿಯ ವಾತಾವರಣವಿದೆ. ಮುಂದಿನ 24 ಗಂಟೆಗಳಲ್ಲಿ ಕೊಡಗಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾಗಮಂಡಲ ಹೋಬಳಿ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಭೇಟಿ ನೀಡಿ ಪರಿಶೀಲಿಸಿದರು.
ಬೆಂಗೂರು ಗ್ರಾಮದ ದೋಣಿಕಾಡು ಪ್ರದೇಶವನ್ನು ಹಾಗೂ ಭಾಗಮಂಡಲದ ತ್ರಿವೇಣಿ ಸಂಗಮವನ್ನು ವೀಕ್ಷಿಸಿದರು. ನಂತರ ಪದಕಲ್ಲು ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಭಾಸ್ಕರ್ ಎಂಬುವರ ಮನೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಿದರು.
ಕಾಳಜಿ ಕೇಂದ್ರ ಪರಿಶೀಲನೆ : ಮಳೆಗಾಲದಲ್ಲಿ ಮುಂಜಾಗೃತ ಕ್ರಮವಾಗಿ ಕಾಳಜಿ ಕೇಂದ್ರಕ್ಕೆ ಕಾಯ್ದಿರಿಸಿದ ಚೇರಂಬಾಣೆ ಬಾಲಕರ ಭವನ, ಭಾಗಮಂಡಲ ಐಟಿಐ ಕಾಲೇಜು ಹಾಗೂ ಕಾಶಿ ಮಠದಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಈ ಸಂದರ್ಭ ಭಾಗಮಂಡಲ ಹೋಬಳಿ ಕಂದಾಯ ಪರಿಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಹಾಜರಿದ್ದರು.
ಆಹಾರ ಕಿಟ್ ವಿತರಣೆ : ಕಳೆದ ಕೆಲ ದಿನಗಳ ಭಾರೀ ಮಲೆಯಿಂದಾಗಿ ಶನಿವಾರಸಂತೆ ಹೋಬಳಿ ದೊಡ್ಡಹಣಕೊಡು ಗ್ರಾಮದ ನಿವಾಸಿ ಸುಬ್ಬಯ್ಯ ಎಂಬವರ ಮನೆ ಶೇ.50ರಷ್ಟು ಹಾನಿಗೊಳಗಾಗಿತ್ತು.
ಕುಶಾಲನಗರ ತಾಲ್ಲೂಕು ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಲೀಲಾವತಿ, ಶಾಂತಳ್ಳಿ ಹೋಬಳಿ ತಲ್ತಾರೆಶೆಟ್ಟಳ್ಳಿ ಗ್ರಾಮದ ನಿವಾಸಿ ಸುಶೀಲ, ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿ ದೊಡ್ಡಹನಕೋಡು ಗ್ರಾಮದ ನಿವಾಸಿ ಈರಮ್ಮ, ಪಾರ್ವತಿ ಎಂಬವರ ಮನೆ ಮಳೆಯಿಂದ ಹಾನಿಗೊಳಗಾಗಿದ್ದು, ಕುಶಾಲನಗರ ಹಾಗೂ ಸೋಮವಾರಪೇಟೆ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲೀಸಿ, ಸಂತ್ರಸ್ತರಿಗೆ ಆಹಾರದ ಕಿಟ್ ವಿತರಣೆ ಮಾಡಿದರು.
ಕೊಡಗು ಜಿಲ್ಲೆಯ ಮಳೆ ವಿವರ : ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 53.94 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.07 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 643.27 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 326.97 ಮಿ.ಮೀ ಮಳೆಯಾಗಿತ್ತು.