ಕೊಡಗಿನಲ್ಲಿ ಮಳೆ ಇಳಿಮುಖ : ನದಿಪಾತ್ರದಲ್ಲಿ ತಗ್ಗದ ಪ್ರವಾಹ

ಮಡಿಕೇರಿ : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿದ ಮಳೆಯ ಬಿರುಸು ಶುಕ್ರವಾರ ಬಹುತೇಕ ಇಳಿಮುಖಗೊಂಡಿದೆ. ಹೀಗಿದ್ದೂ ನದಿಪಾತ್ರದ ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ಮುಂದುವರೆದಿದ್ದು, ಅಲ್ಲಲ್ಲಿ ಮನೆಗಳಿಗೆ ನೀರು ನುಗ್ಗಿದ, ಕುಡ್ಡ ಕುಸಿದಿರುವ ಘಟನೆಗಳು ನಡೆದಿದೆ.
ಭಾರೀ ಮಳೆಯಿಂದ ಕಾವೇರಿ ನದಿಯಲ್ಲಿ ಕಾಣಿಸಿಕೊಂಡ ಪ್ರವಾಹದಿಂದಾಗಿ, ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿಯ ಕುಂಬಾರಗುಂಡಿ ಹೊಳೆಕೆರೆ ನಿವಾಸಿ ಬೇಬಿ ಎಂಬವರ ಗುಡಿಸಲಿಗೆ ನೀರು ನುಗ್ಗಿದರೆ, ಅಕ್ಕಣಿ ಎಂಬವರ ಗುಡಿಸಲು ಜಲಾವೃತ್ತವಾಗಿದ್ದು, ಸದರಿ ಕುಟುಂಬದವರನ್ನು ಸ್ಥಳದಿಂದ ತೆರವುಗೊಳಿಸಲಾಗಿದ್ದು, ಅವರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.
ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ಕೊಟ್ಟಗೇರಿ ಗ್ರಾಮದ ರಸ್ತೆ ಮಳೆಯಿಂದಾಗಿ ಜಲಾವೃತಗೊಂಡಿದ್ದು, ಬ್ಯಾರಿಕೇಡ್ ಅಳವಡಿಸಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸದರಿ ಗ್ರಾಮಕ್ಕೆ ತೆರಳಲು ಬದಲಿ ಸಂಪರ್ಕ ರಸ್ತೆ ಇದೆ.
ನಿಟ್ಟೂರು ಗ್ರಾಮದ ವ್ಯಾಪ್ತಿಯ ಚಿಣ್ಣರ ಹಾಡಿ ಸಂಪರ್ಕ ಸೇತುವೆ ಪಕ್ಕದಲ್ಲಿ ಬರೆ ಕುಸಿದಿದ್ದು ಈ ಕುರಿತು ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಉತ್ತರ ಕೊಡಗು ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಕುಮಾರಳ್ಳಿ ಬಾಚಳ್ಳಿ ಗ್ರಾಮದ ಕುಂದಳ್ಳಿ-ಪುಷ್ಪಗಿರಿ ಸಂಪರ್ಕ ರಸ್ತೆಯ ಮೇಲೆ ಮಣ್ಣು ಕುಸಿದು, ವಿದ್ಯುತ್ ಕಂಬವೊಂದು ಮೊಗುಚಿಕೊಂಡ ಘಟನೆ ನಡೆದಿದೆ. ರಸ್ತೆಯ ಮೇಲಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ.
ಸೋಮವಾರಪೇಟೆ ಪಟ್ಟಣದ ವಿಶ್ವ ಮಾನವ ವಿದ್ಯಾಸಂಸ್ಥೆಯ ಆವರಣದ ತಡೆಗೋಡೆ ತೀವ್ರ ಗಾಳಿಮಳೆಯಿಂದ ಕುಸಿದು ಬಿದ್ದಿದೆ.
ಇಂದು ಕೂಡ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಹಾಗೂ ಅಧಿಕಾರಿಗಳು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.