ಕೊಡಗಿನಲ್ಲಿ ಮತ್ತೆ ಮುಂಗಾರು ಚುರುಕು : ರೆಡ್ ಅಲರ್ಟ್ ಘೋಷಣೆ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಗಾಳಿ ಮಳೆ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.
ಬುಧವಾರ ರಾತ್ರಿಯಿಂದ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕಳೆದ 24 ಗಂಟೆ ಅವಧಿಯಲ್ಲಿ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ ದಾಖಲೆಯ 6 ಇಂಚು ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 49.44 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 17.55 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1486.74 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 893.60 ಮಿ.ಮೀ ಮಳೆಯಾಗಿತ್ತು.
ನದಿ ಹಾಗೂ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮರಗಳು ಬಿದ್ದು ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದೆ. ರಸ್ತೆಗಳು ಹದಗೆಟ್ಟು ಕೆಸರುಮಯವಾಗಿದ್ದು, ವಾಹನ ಸಂಚಾರ ಕಷ್ಟಸಾಧ್ಯವಾಗಿದೆ. ಮಡಿಕೇರಿ ನಗರದಲ್ಲಿ ಕೊಡವ ಮಂದ್ ನಲ್ಲಿದ್ದ ಸುಮಾರು 200 ವರ್ಷಗಳಷ್ಟು ಹಳೆಯದಾದ ಬೃಹತ್ ಮರವೊಂದು ಗಾಳಿ ಮಳೆಗೆ ಬಿದ್ದು ಹೋಗಿದೆ.
ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವುದರಿಂದ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿರುವ ಪೊಲೀಸ್ ಅಧಿಕಾರಿಗಳು ಅನಿವಾರ್ಯ ಸಂದರ್ಭಗಳಲ್ಲಿ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಎನ್‍ಡಿಆರ್ ಎಫ್ ತಂಡ ಹಾಗೂ ಅಗ್ನಿ ಶಾಮಕ ದಳ ಸನ್ನದ್ಧವಾಗಿದೆ.
ಮಳೆ ವಿವರ :
ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ ಮಳೆ 60.30 ಮಿ.ಮೀ. ಕಳೆದ ವರ್ಷ ಇದೇ ದಿನ 18.08 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2114.19 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1278.54 ಮಿ.ಮೀ. ಮಳೆಯಾಗಿತ್ತು.